

ಕಡೂರು: ಕೊಬ್ಬರಿ ಖರೀದಿ ಕೇಂದ್ರದ ಲಾಭ ರೈತರಿಗೆ ಮಾತ್ರ ದೊರೆಯಬೇಕು. ವರ್ತಕರಿಗೆ ಅವಕಾಶ ನೀಡಬಾರದು. ಲಾರಿಗಳಲ್ಲಿ ತರುವ ಉತ್ಪನ್ನಗಳನ್ನು ಖರೀದಿಸಬೇಡಿ. ಯಾವುದೇ ಲೋಪವಾದರೂ ನಾನೇ ಖುದ್ದಾಗಿ ಬಂದು ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಎಚ್ಚರಿಕೆ ನೀಡಿದರು.
ಎಪಿಎಂಸಿ ಆವರಣದಲ್ಲಿ ಶುಕ್ರವಾರ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಬರಗಾಲ ಪರಿಸ್ಥಿತಿಯಲ್ಲಿ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಆರಂಭವಾಗಿರುವುದು ರೈತರಿಗೆ ಸ್ಪಲ್ಪ ಸಮಾಧಾನ ತಂದಿದೆ. ಕೊಬ್ಬರಿ ಖರೀದಿ ಕೇಂದ್ರ ಆರಂಭಿಸುವ ಇರಾದೆ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ. ನನ್ನನ್ನೂ ಸೇರಿದಂತೆ ತೆಂಗು ಬೆಳೆಯುವ ಪ್ರದೇಶದ ಶಾಸಕರೆಲ್ಲರ ಸಾಂಘಿಕ ಹೋರಾಟ ಮತ್ತು ವಿಪಕ್ಷ ನಾಯಕರ ಸಹಕಾರದೊಂದಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರ ಫಲವಾಗಿ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ 12 ಸಾವಿರ ರೂಪಾಯಿ ಜತೆಗೆ ರಾಜ್ಯ ಸರ್ಕಾರ 1500 ಸಾವಿರ ಸೇರಿ ಒಟ್ಟು ಒಂದು ಕ್ವಿಂಟಾಲ್ ಕೊಬ್ಬರಿಗೆ 13500 ರೂ. ದೊರೆಯುತ್ತಿದೆ. ರಾಗಿ ಒಂದು ಕ್ವಿಂಟಾಲ್‌ಗೆ 3846 ರೂ. ದೊರೆಯುತ್ತಿರುವುದು ರೈತರಿಗೆ ಸಮಾಧಾನ ತಂದಿದೆ ಎಂದರು.
ಪುರಸಭೆ ಸದಸ್ಯರಾದ ಭಂಡಾರಿ ಶ್ರೀನಿವಾಸ್, ಕೆ.ಎಂ.ಮೋಹನ್‌ಕುಮಾರ್, ರಾಜ್ಯ ಮಾರಾಟ ಮಹಾಮಂಡಳ ನಿರ್ದೇಶಕ ದಿನೇಶ್, ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ಯೋಗಾನಂದ್, ತಾಲೂಕು ಆಹಾರ ನಿರೀಕ್ಷಕಿ ಶಿಲ್ಪಾ, ಎಪಿಎಂಸಿ ಕಾರ್ಯದರ್ಶಿ ಧರ್ಮರಾಜ್ ಇತರರಿದ್ದರು.