ಹಿಪ್ಪರಗಿ ಜಲಾಶಯದಲ್ಲಿ 3 ಟಿಎಂಸಿ ಮಾತ್ರ ನೀರು

rbk neeru
ರಬಕವಿ ಬನಹಟ್ಟಿ ಸಮೀಪದ ಕಷ್ಣಾ ನದಿಯ ಮಹೇಷವಾಡಗಿ ಬ್ರಿಜ್‌ನಲ್ಲಿ ಬುಧುವಾರ ಸಂಜೆ ಸಂಗ್ರಹವಾದ ನೀರು.
Published on

ರಬಕವಿ/ಬನಹಟ್ಟಿ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೆ ಸಂಜೀವಿನಿಯಾಗಿರುವ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯವು ತನ್ನ ಒಡಲೊಳಗಿನ ನೀರನ್ನು ಕಡಿಮೆ ಮಾಡಿಕೊಳ್ಳುತ್ತ ಇದೀಗ ಬೇಸಿಗೆ ನಿಭಾಯಿಸುವುದೇ ಸವಾಲಾಗಿ ಕಾಡುತ್ತಿದೆ.

ಗರಿಷ್ಠ 6 ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಇದೀಗ ಕೇವಲ 3 ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿದೆ. ಅಧಿಕಾರಿಗಳ ಪ್ರಕಾರ ಪ್ರತಿ ತಿಂಗಳಿಗೆ 1 ಟಿಎಂಸಿಯಷ್ಟು ನೀರು ಹಿಪ್ಪರಗಿ ಜಲಾಶಯದಿಂದ ಬಳಕೆಯಾಗುತ್ತಿದೆ. ಇದೀಗ 3 ಟಿಎಂಸಿ ನೀರು ಮೇ ತಿಂಗಳವರೆಗೂ ನಿರ್ವಹಣೆಯಾಗುವುದೇ ಸವಾಲಿನ ಸಮಸ್ಯೆಯಾಗಿದ್ದು, ಶೀಘ್ರವೇ ಮಹಾರಾಷ್ಟ್ರದಿಂದ ಕನಿಷ್ಠ 2 ಟಿಎಂಸಿಯಷ್ಟು ನೀರನ್ನು ಬಿಡುಗಡೆಗೊಳಿಸಿದ್ದಲ್ಲಿ ಬೇಸಿಗೆ ನಿಭಾಯಿಸಲು ಸಾಧ್ಯವೆಂಬುದು ತಾಂತ್ರಿಕ ವಿಭಾಗದ ಲೆಕ್ಕಾಚಾರ.

ಬೆಳೆಗೆ ನೀರು ಬಳಕೆಗೆ ಕಡಿವಾಣ?: ಕುಡಿಯುವ ನೀರಿನ ಸಮಸ್ಯೆ ಎದುರಾಗುವ ನಿಟ್ಟಿನಲ್ಲಿ ನದಿ ತಟದಲ್ಲಿರುವ ಭೂಮಿಗಳಿಗೆ ರೈತರು ಹರಿಸುತ್ತಿರುವ ನೀರು ಪೂರೈಕೆಗೆ ಕಡಿವಾಣ ಹಾಕುವ ಲೆಕ್ಕಾಚಾರವಿದೆ. ಇದರಿಂದಾಗಿ ಕುಡಿಯುವ ನೀರಿಗೆ ಜನ-ಜಾನುವಾರುಗಳಿಗೆ ಅನುಕೂಲವಾಗುವುದು. ಆದರೆ, ರೈತ ಬೆಳೆದ ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆಯಾಗದಿದ್ದಲ್ಲಿ, ಬೆಳೆ ನಾಶವಾಗುವ ಭೀತಿಯೂ ಇದೆ. ಇದರಿಂದ ಸರ್ಕಾರ ಯಾವ ನಿರ್ಧಾರ ಕೈಗೊಂಡು ನೀರಿನ ವ್ಯವಸ್ಥೆ ಮಾಡಲಿದೆ ಎಂಬುದೇ ಪ್ರಶ್ನೆಯಾಗಿದೆ.

ನದಿಯಲ್ಲಿನ ನೀರನ್ನೇ ನಂಬಿ ಸಾವಿರಾರು ಎಕರೆಯಷ್ಟು ಕಬ್ಬು ಹಾಗೂ ಇನ್ನೀತರ ಬೇಸಿಗೆಯ ವಾಣಿಜ್ಯ ಬೆಳೆಗಳಿವೆ, ಅಲ್ಲದೆ ಈಗ ತಾನೆ ಕಬ್ಬು ಕಟಾವು ಮಾಡಿದ ಬಳಿಕ ಕುಳೆ ಕಬ್ಬಿಗೆ ನೀರು ಹಾಯಿಸದಿದ್ದರೆ ಅದು ನೆಲದಲಿಯೇ ಕಮರುವ ಸಾಧ್ಯತೆ ಇದೆ. ಸರ್ಕಾರ ಕೋಯ್ನ ಜಲಾಶಯದಿಂದ ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು.
ಪರಶುರಾಮ ಅಡಿವೆಪ್ಪಗೋಳ, ರೈತ ಹಳಿಂಗಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net