

ಮುಂಡಗೋಡ: ಆಧಾರ ಸೇವಾ ಕೆಂದ್ರದಲ್ಲಿ ದಿನಕ್ಕೆ 25 ಆಧಾರ ಕಾರ್ಡ್ ತಿದ್ದುಪಡಿ ಕಾರ್ಯ ಮಾಡುವುದರಿಂದ ಪ್ರತಿದಿನವೂ ನೂರಾರು ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ.
ತಾಲೂಕಿನ ಪಾಳಾ ಹಾಗೂ ಮುಂಡಗೋಡ ಪಟ್ಟಣದಲ್ಲಿ ಆಧಾರ ಸೇವಾ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಕೇವಲ 25 ಜನರ ಆಧಾರ ಕಾರ್ಡ್ ತಿದ್ದುಪಡಿ ಅಥವಾ ಹೊಸ ಆಧಾರ ಕಾರ್ಡ್ ಮಾಡಲಾಗುತ್ತದೆ. ಆದರೆ, ಎರಡು ಆಧಾರ ಸೇವಾ ಕೇಂದ್ರಗಳಲ್ಲಿ ಪ್ರತಿದಿನ ಸರಾಸರಿ 50ಕ್ಕೂ ಹೆಚ್ಚು ಜನರು ಆಗಮಿಸಿ ಸರದಿ ಸಾಲಲ್ಲಿ ನಿಲ್ಲುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದರಿಂದ ಅರ್ಧ ಜನರು ಆಧಾರ ಕಾರ್ಡ್ ಮಾಡಿಸಿಕೊಂಡರೆ ಮತ್ತೆ ಕೆಲವರು ನಿರಾಸೆಯಿಂದ ಮನೆಗೆ ಮರಳುತ್ತಿದ್ದಾರೆ.
ನಸುಕಿನಲ್ಲಿ ಪಾಳೆ: ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿಯಲ್ಲಿರುವ ಆಧಾರ ಸೇವಾ ಕೇಂದ್ರದ ಮುಂದೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಜನರು ನಸುಕಿನ ಜಾವ 5 ಗಂಟೆಯಿಂದ ಪಾಳೆ ಹಚ್ಚುತ್ತಾರೆ. ತಡವಾಗಿ ಬಂದರೆ ಇವತ್ತು ಆಧಾರ ಕಾರ್ಡ್ ಮಾಡಿಸಲು ಆಗುವುದಿಲ್ಲ ಎಂದು ಬೆಳಗ್ಗೆ ಬೇಗ ಬಂದು ಪಾಳೆ ಹಚ್ಚುತ್ತಾರೆ.
ಆಧಾರ ಸೇವಾ ಕೆಂದ್ರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಕೇವಲ 25 ಜನರ ಆಧಾರ ಕಾರ್ಡ್ ಮಾಡಲು ಮಾತ್ರ ಸಾಧ್ಯವಾಗುತ್ತದೆ. ಅದಕ್ಕಾಗಿ ಸೇವಾ ಕೇಂದ್ರದ ಸಿಬ್ಬಂದಿಯೂ 25 ಜನರಿಗೆ ಚೀಟಿ ನೀಡಿ ಕೈ ಬಿಡುತ್ತಾರೆ. ಇನ್ನುಳಿದ ಜನರಿಗೆ ನಾಳೆ ಬರುವಂತೆ ಸೂಚಿಸಿ ತಮ್ಮ ಕೆಲಸ ಆರಂಭಿಸುತ್ತಾರೆ. ಮರುದಿನವೂ ನಸುಕಿನಲ್ಲಿ ಬಂದು ಪಾಳೆ ಹಚ್ಚಿದರೆ ಮಾತ್ರ ಆಧಾರ ಕಾರ್ಡ್ ಮಾಡಿಸಬಹುದು ತಡವಾಗಿ ಬಂದರೆ ಮತ್ತೆ ಮರಳಿ ಮನೆಗೆ ಹೋಗಬೇಕಾಗುತ್ತದೆ.
ರಜೆ ತೆರಳಿದ ಸಿಬ್ಬಂದಿ: ಮುಂಡಗೋಡನಲ್ಲಿರುವ ಆಧಾರ ಸೇವಾ ಕೇಂದ್ರದ ಮಹಿಳಾ ಸಿಬ್ಬಂದಿ ಹೆರಿಗೆ ರಜೆ ಮೇಲೆ ತೆರಳಿದ್ದರಿಂದ ಪಾಳಾ ಆಧಾರ ಸೇವಾ ಕೇಂದ್ರದ ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಅವರು ವಾರದಲ್ಲಿ ಮೂರು ದಿನ ಮುಂಡಗೋಡ ಹಾಗೂ ಉಳಿದ ಮೂರು ದಿನ ಪಾಳಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಜನರು ತಮ್ಮ ಆಧಾರ ಕಾರ್ಡ್ ತಿದ್ದುಪಡಿ ಮಾಡಿಸಲು ವಾರದಲ್ಲೇ ಮೂರು ದಿನ ಮಾಡುವುದರಿಂದ ಪರದಾಡುವಂತಾಗಿದೆ.
ಹೆಚ್ಚಿಸಬೇಕಿದೆ ಆಧಾರ ಕೇಂದ್ರ: ಸರ್ಕಾರಿ ಕಚೇರಿಯ ಯಾವುದೆ ಕೆಲಸಕ್ಕೆ ಹೋದರೂ ಆಧಾರ ಕಾರ್ಡ್ ಕಡ್ಡಾಯವಾಗಿ ಕೇಳುತ್ತಾರೆ. ಹೆಸರು, ವಿಳಾಸ, ಮೊಬೈಲ್ ನಂ. ಹೀಗೆ ಯಾವುದಾದರೂ ಸಮಸ್ಯೆಯಿದ್ದರೆ ಅದನ್ನು ತಿದ್ದುಪಡಿ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಾರೆ. ಆದರೆ, ಆಧಾರ ತಿದ್ದುಪಡಿ ಮಾಡಿಸಿಕೊಂಡು ಹೋಗಲು ಇದೀಗ ಜನರು ಪರದಾಡುತ್ತಿದ್ದು, ತಾಲೂಕಿನಲ್ಲಿ ಮತ್ತಷ್ಟು ಆಧಾರ ಸೇವಾ ಕೇಂದ್ರ ಆರಂಭಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಅತಿ ಅವಶ್ಯವಿದೆ.