

ಮಡಿಕೇರಿ: ಮಡಿಕೇರಿ ನಗರಸಭೆ ೧೮೩೮ ಉದ್ದಿಮೆಯಲ್ಲಿ ೧೪೮ ಉದ್ದಿಮೆದಾರರು ಮಾತ್ರ ನವೀಕರಣ ಮಾಡಿಸಿಕೊಂಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ವಿಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿರುವ ವಿವಿಧ ಅಂಗಡಿ ಮುಂಗಟ್ಟು ಉದ್ದಿಮೆದಾರರ ೨೦೨೩-೨೪ ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆ ಈಗಾಗಲೇ ಏ.೧ ರಿಂದ ಪ್ರಾರಂಭವಾಗಿದೆ. ೧೮೩೮ ಅಧಿಕೃತ ಉದ್ದಿಮೆ ಪರವಾನಿಗೆಗಳ ಪೈಕಿ ೧೪೮ ಉದ್ದಿಮೆದಾರರು ಮಾತ್ರ ನವೀಕರಿಸಿಕೊಂಡಿದ್ದಾರೆ. ಉಳಿದ ಉದ್ದಿಮೆದಾರರು ಆದಷ್ಟು ಶೀಘ್ರವಾಗಿ ನವೀಕರಣ ಮಾಡಿಕೊಳ್ಳಬೇಕು. ಉದ್ದಿಮೆ ಪರವಾನಿಗೆ ನವೀಕರಿಸದೆ ವ್ಯಾಪಾರ ವಹಿವಾಟು ಮಾಡುತ್ತಿರುವುದು ೧೯೬೪ ರ ಪೌರಸಭೆಗಳ ಅಧಿನಿಯಮ ಕಲಂ ೨೪೩ ಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗಿ ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ವ್ಯಾಪಾರ ತಂತ್ರಾಂಶದಲ್ಲಿ ಕಚೇರಿಗೆ ಅರ್ಜಿ ಸಲ್ಲಿಸದೆ ಉದ್ದಿಮೆದಾರರು ಸ್ವಯಂ ಚಾಲಿತವಾಗಿ ನಿಗಧಿತ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿ ನವೀಕರಣಗೊಳಿಸುವ ಅವಕಾಶವಿದ್ದು, ಅದರಂತೆ ಚಾಲ್ತಿಯಲ್ಲಿರುವ ಉದ್ದಿಮೆದಾರರು ಪ್ರಸಕ್ತ ವರ್ಷದ ನವೀಕರಣವನ್ನು ಮಾಡಿಕೊಳ್ಳಬಹುದು. ಉಳಿದಂತೆ ಒಂದು ವರ್ಷಕ್ಕಿಂತ ಹೆಚ್ಚು ನವೀಕರಣವಿರುವ ಉದ್ದಿಮೆದಾರರು ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಹಳೆಯ ಉದ್ದಿಮೆ ಪರವಾನಿಗೆ ಮತ್ತು ತೆರಿಗೆ ಪಾವತಿಯ ರಶೀದಿಗಳನ್ನು ಮಾತ್ರ ಅಡಕಗೊಳಿಸಿ ೪೮ ಗಂಟೆ ಒಳಗೆ ನವೀಕರಣಗೊಳಿಸಿಕೊಳ್ಳುವಂತೆ ಸರಳಿಕರಣ ಮಾಡಲಾಗಿದೆ. ಈ ಸದಾವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ http://www.madikericity.mrc.gov.in, http://www.madikericity.mrc.gov.in ಅಥವಾ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ವಿಜಯ ತಿಳಿಸಿದ್ದಾರೆ.