ಆನ್‌ಲೈನ್ ವ್ಯಾಪಾರಕ್ಕೆ ಕಡಿವಾಣ ಹಾಕಲು ವಿಜಯಪುರದಲ್ಲಿ ವ್ಯಾಪಾರಿಗಳ ಪಟ್ಟು

28-vij-2a-varthaka-vitharakara prathibhatane
Published on

ವಿಜಯಪುರ: ಇಂದು ಆನ್‌ಲೈನ್ ವ್ಯಾಪಾರದಿಂದ ಸಣ್ಣ ವ್ಯಾಪಾರಿಗಳು ಬೀದಿಗೆ ಬೀಳುವಂತಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಎಸ್.ಮಹೇಶ್ ಅಲವತ್ತುಕೊಂಡರು.

ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಕರ್ನಾಟಕ ಗ್ರಾಹಕರ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ವಿತರಕರ ಕ್ಷೇಮಾವೃದ್ಧಿ ಸಂಘ ಹಾಗೂ ದಿನಸಿ ವರ್ತಕರ ಸ್ನೇಹಕೂಟ, ಔಷಧ ಮಳಿಗೆಗಳ ಸಂಘ, ಜವಳಿ ವರ್ತಕರ ಸಂಘ, ಹಾರ್ಡ್‌ವೇರ್ ವರ್ತಕರ ಸಂಘಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ಬಂದ್ ಮತ್ತು ಪ್ರತಿಭಟನಾ ಮೆರವಣಿಗೆ ನಡೆಸಿ, ಮಾತನಾಡಿದರು.

ಒಂದೇ ದೇಶ, ಒಂದು ತೆರಿಗೆ ಎಂಬಂತೆ ವರ್ತಕರು ಹಾಗೂ ವಿತರಕರ ಹಿತ ಕಾಯಲು ಒಂದೇ ದೇಶ, ಒಂದೇ ಬೆಲೆ ಎಂಬ ನಿಯಮ ಅಳವಡಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂದು ನಗರ, ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಮಾಲ್‌ಗಳ ಹಾವಳಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಜೀವನ ನಡೆಸಲು ಕಷ್ಟವಾಗಿದೆ. ಆನ್‌ಲೈನ್‌ಗಳ ಅಸಂಬದ್ಧ ರಿಯಾಯಿತಿ ತಡೆಯುವ ನಿಯಮಾವಳಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ವೀರೇಶ್ ಮಾತನಾಡಿ, ನಾವೆಲ್ಲರೂ ಪಾರಾಂಪರಿಕವಾಗಿ ವ್ಯಾಪಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ದೇಶದ ಆರ್ಥಿಕ ಏಳಿಗೆಗಾಗಿ ತೆರಿಗೆ ಪಾವತಿಸುವ ಮೂಲಕ ಬಹಳಷ್ಟು ಶ್ರಮಿಸಿದ್ದೇವೆ. ಈ ವ್ಯಾಪಾರ ವೃತ್ತಿಯಲ್ಲಿ ಸರ್ಕಾರದ ಸೌಲಭ್ಯ ಆಶಿಸದೆ ಬಹಳಷ್ಟು ಸಣ್ಣ ಮತ್ತು ಮಧ್ಯಮ ಕುಟುಂಬಗಳಿಗೆ ವೃತ್ತಿ ಕಲ್ಪಿಸಿಕೊಟ್ಟಿದ್ದೇವೆ ಎಂದರು.

ವರ್ತಕರ ಸಂಘದ ಖಜಾಂಚಿ ಶಶಿಧರ್ ಮಾತನಾಡಿ, ವ್ಯಾಪಾರಸ್ಥರ ಹಿತ ಕಾಪಾಡಲು ಸರ್ಕಾರದಿಂದ ನಿಗಮ ಮಂಡಳಿ ಅಸ್ತಿತ್ವಕ್ಕೆ ತರಬೇಕು. ವಿಧಾನ ಪರಿಷತ್‌ನಲ್ಲಿ ವ್ಯಾಪಾರಿಗಳ ಹಿತ ಕಾಪಾಡಲು ವ್ಯಾಪಾರಿ ಪ್ರತಿನಿಧಿಗೆ ಅವಕಾಶ ಕಲ್ಪಿಸಬೇಕು, ಜಿಎಸ್‌ಟಿ ಪಾವತಿದಾರರಿಗೆ ಉಚಿತ ವಿಮೆ ಕಲ್ಪಿಸಿ, ಹೊಸ ಆನ್‌ಲೈನ್, ಮಾಲ್‌ಗಳಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ವರ್ತಕರ ಸಂಘದ ಸದಸ್ಯ ಸಿ.ಸುರೇಶ್, ಔಷಧ ಮಾಲೀಕರ ಸಂಘದ ಸದಸ್ಯ ಬಿ.ಪ್ರಭುದೇವ್, ವಿತರಕರ ಸಂಘದ ಸದಸ್ಯರಾದ ಎಸ್.ವೀರೇಂದ್ರ, ಸಿ.ಚಂದ್ರಕುಮಾರ್, ಜವಳಿ ವರ್ತಕರ ಸಂಘದ ಸದಸ್ಯರಾದ ಪಿ.ಚಂದ್ರಪ್ಪ, ಸಂಜಯ್, ಸಿ.ಜಯಶಂಕರ್, ಬಿ.ಮಧುಸೂದನ್, ಎನ್.ಬಸವರಾಜ್, ಕುಮಾರು, ಚಂದ್ರ, ಸುರೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net