ಶಾಲಾಸಂಸತ್‌ಗೆ ಆನ್‌ಲೈನ್ ವೋಟ್: ಓಂತ್ರಡ್ಕ ಸರ್ಕಾರಿ ಶಾಲೆಯಲ್ಲಿ ವಿನೂತನ ಪ್ರಯೋಗ

vote
ಚುನಾಯಿತರಿಗೆ ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ ಪ್ರಮಾಣವಚನ ಬೋಧಿಸಿದರು.
Published on

ಪ್ರವೀಣ್‌ರಾಜ್ ಕೊಲ

ಪ್ರಜಾಪ್ರಭುತ್ವ ವವ್ಯಸ್ಥೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕಡಬ ತಾಲೂಕಿನ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆನ್‌ಲೈನ್‌ಮೂಲಕ ಶಾಲಾ ಮಂತ್ರಿ ಮಂಡಲ ಸದಸ್ಯರನ್ನು ಆಯ್ಕೆ ಮಾಡುವ ವಿಭಿನ್ನ ಪ್ರಯತ್ನ ಯಶ ಕಂಡಿದೆ.

ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ಆನ್‌ಲೈನ್‌ಮೂಲಕ ಮತದಾನ ಮಾಡುವ ಹೊಸ ಪ್ರಯೋಗವನ್ನು ಶಿಕ್ಷಕರು ಈ ಬಾರಿ ಪರಿಚಯಿಸಿದ್ದರು. ಶಾಲಾ ಜಿ.ಪಿ.ಟಿ ಶಿಕ್ಷಕ ದಿಲೀಪ್‌ಕುಮಾರ್ ಸಂಪಡ್ಕ ಚಿಂತನೆಯಲ್ಲಿ ಮೂಡಿಬಂದ ಈ ಹೊಸ ಪ್ರಯೋಗಕ್ಕೆ ವಿದ್ಯಾರ್ಥಿಗಳು ಉತ್ಸಾಹದಿಂದ ಪ್ರತಿಕ್ರಿಯಿಸಿದರು.

ಹೇಗಿತ್ತು ತಯಾರಿ

ಮೊದಲಿಗೆ ಮತದಾನ ಮಾಡಲು ಗೂಗಲ್ ಫಾರ್ಮ್ ಬಳಸಿಕೊಂಡು ಹತ್ತು ಮಂತ್ರಿ ಹುದ್ದೆ ಆಕಾಂಕ್ಷಿಗಳಿಂದ ನಾಮಪತ್ರ ಪಡೆದು, ಪರಿಶೀಲನೆ ಬಳಿಕ ಅಭ್ಯರ್ಥಿಗಳ ಅಂತಿಮಪಟ್ಟಿ ಪ್ರಕಟಿಸಲಾಯಿತು. ಅವರಿಗೆ ನೀಡಿದ ಚಿಹ್ನೆ ಮತ್ತು ಅಭ್ಯರ್ಥಿಗಳ ಫೋಟೋ ಸಮೇತ ಮಾಹಿತಿಯನ್ನು ಫಾರ್ಮ್‌ನಲ್ಲಿ ಅಳವಡಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಲ್ಲಿ ವಾಟ್ಸಾಪ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿತ್ತು. ಚುನಾವಣೆ ದಿನ ಗೊತ್ತು ಮಾಡಿ ಸಾಯಂಕಾಲ 6ರಿಂದ 8ರವರೆಗೆ ಮತದಾನ ಮಾಡಲು ವೋಟಿಂಗ್ ಲೈನ್ ತೆರೆದಿಡಲಾಗಿತ್ತು. ಮತದಾನಕ್ಕೆ ತೊಂದರೆ ಉಂಟಾದಲ್ಲಿ ಸೂಕ್ತ ಸಲಹೆ ನೀಡಲು ಸಹಾಯವಾಣಿ ತೆರೆದು, ಆನ್‌ಲೈನ್ ಮತದಾನದ ಮಾರ್ಗಸೂಚಿ ಪ್ರಕಟಿಸಲಾಯಿತು. ಸ್ಮಾರ್ಟ್‌ಫೋನ್ ಇಲ್ಲದ ಮತ್ತು ಮತದಾನ ಮಾಡಲು ತೊಂದರೆಯಾದ ವಿದ್ಯಾರ್ಥಿಗಳಿಗೆ ಮರುದಿನ ಶಾಲೆಯಲ್ಲೇ ಮತ ಹಾಕಲು ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಗುಪ್ತಪದವನ್ನು ಬಳಸಿದರೆ ಮಾತ್ರ ಆನ್‌ಲೈನ್ ವೋಟಿಂಗ್ ತೆರೆದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಐದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು. ಚುನಾವಣೆಯಲ್ಲಿ ಭಾಗವಹಿಸಿದವರಿಗೆ ಇ-ಮೇಲ್ ಮೂಲಕ ಪ್ರಮಾಣ ಪತ್ರನೀಡುವ ವ್ಯವಸ್ಥೆ ಮಾಡಲಾಗಿತ್ತು.

ಮನೆಗೇ ತೆರಳಿದ್ದ ಶಿಕ್ಷಕ !

ಚುನಾವಣೆಯ ಮರುದಿನ ಐದು ವಿದ್ಯಾರ್ಥಿಗಳು ಶಾಲೆಯಲ್ಲಿ ಸ್ಥಾಪಿಸಿದ್ದ ಆನ್‌ಲೈನ್ ವೋಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಮತದಾನ ಚಲಾಯಿಸಿದರು. ಆದರೆ ಓರ್ವ ವಿದ್ಯಾರ್ಥಿನಿ ಗೈರು ಹಾಜರಿಯಾಗಿದ್ದರಿಂದ ಶೇ100 ಮತದಾನ ಕೈ ತಪ್ಪುವ ವಿಚಾರವನ್ನು ಅರಿತ ಶಿಕ್ಷಕ ವಿದ್ಯಾರ್ಥಿನಿಯ ಮನೆಗೆ ಹೋಗಿ ಆನ್‌ಲೈನ್ ಮತದಾನ ಮಾಡಿಸಿದರು.

ಪಕ್ಷ ಬಳಕೆ !

ಓಂತ್ರಡ್ಕ ಮಕ್ಕಳ ಪಕ್ಷ ಮತ್ತು ಪ್ರಜಾಪ್ರಭುತ್ವ ಮಕ್ಕಳ ಪಕ್ಷ ಎಂಬ ಎರಡು ಪಕ್ಷಗಳ ಅಡಿಯಲ್ಲಿ ಮಕ್ಕಳು ಚುನಾವಣೆಯಲ್ಲಿ ಭಾಗವಹಿಸಿದ್ದರು. ಕೆಲವು ವಿದ್ಯಾರ್ಥಿಗಳು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು. ನೋಟಾ ಆಯ್ಕೆಯನ್ನು ಸಹ ನೀಡಲಾಗಿತ್ತು. ಐದು ಮತಗಳು ನೋಟಾಕ್ಕೆ ಚಲಾವಣೆಯಾಗಿದ್ದವು.

ಆಯ್ಕೆಯಾದವರು

ಕೀರ್ತನ್.ಕೆ(ಮುಖ್ಯಮಂತ್ರಿ), ಕಾರ್ತಿಕ್(ಉಪ ಮುಖ್ಯಮಂತ್ರಿ),ಜೀವನ್(ಗೃಹ ಮಂತ್ರಿ), ಶ್ರಾವಣಿ(ಸ್ವಚ್ಛತಾ ಮಂತ್ರಿ), ಶ್ರವಣ್‌ಕುಮಾರ್(ಆರೋಗ್ಯ ಮಂತ್ರಿ), ತನುಷ್(ಕ್ರೀಡಾ ಮಂತ್ರಿ), ವಿನೀತ್(ಕೃಷಿ ಮಂತ್ರಿ), ಬಿ.ಚರಣ್(ಸಾಂಸ್ಕೃತಿಕ ಮಂತ್ರಿ), ಹರ್ಷಿತಾ(ವಾರ್ತಾ ಮಂತ್ರಿ), ಸುಕನ್ಯಾ(ಶಿಕ್ಷಣ ಮಂತ್ರಿ), ಹೇಮಂತ್(ಸಭಾಪತಿ), ತಂಸೀನಾ(ವಿರೋಧ ಪಕ್ಷದ ನಾಯಕಿ) ಮತ್ತು ಫಾತಿಮತ್ ಸಫಾ, ವಿಶ್ವಾಸ್, ಮಹಮ್ಮದ್‌ಅಫ್ನಾನ್, ಧನ್ಯಶ್ರೀ, ಮಾನ್ಯ, ಶ್ವೇತಾ, ಮಹಮ್ಮದ್ ಪವಾಜ್, ಶ್ರಾವ್ಯ, ನಿಶಾಂತ್, ಪ್ರೇಮ್‌ಕಿರಣ್, ಎಂ. ಪಲ್ಲವಿ ಪ್ರತಿಪಕ್ಷ ಸದಸ್ಯರಾಗಿ ಆಯ್ಕೆಯಾದರು. ಶಿಕ್ಷಕಿ ಹರಿಣಾಕ್ಷಿ ಡಿ. ಶಿಕ್ಷಕಿ ಚುನಾವಣಾಧಿಕಾರಿಯಾಗಿದ್ದರು.

ಮಂತ್ರಿಮಂಡಲಕ್ಕೆ ಆನ್‌ಲೈನ್‌ನಲ್ಲಿ ಆಯ್ಕೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನ ಕುರಿತು ಹೊಸ ಕಲ್ಪನೆಯನ್ನು ಮೂಡಿಸಲಾಗಿದೆ. ವಿನೂತನ ಪ್ರಯೋಗದ ಚಿಂತನೆಯನ್ನು ಕಾರ್ಯಗತಗೊಳಿಸುವಲ್ಲಿ ಜಿ.ಪಿ.ಟಿ ಶಿಕ್ಷಕ ದಿಲೀಪ್ ಶ್ರಮವಿದೆ. - ನೀಲಯ್ಯ ನಾಯ್ಕ, ಮುಖ್ಯಶಿಕ್ಷಕರು ಬ್ರೆಜಿಲ್‌ನಲ್ಲಿ ಇಲೆಕ್ಟ್ರಾನಿಕ್ ಮತದಾನ ಅನುಸರಿಸಲಾಗುತ್ತಿದೆ. ಈ ಕಲ್ಪನೆಯನ್ನು ಶಾಲಾ ಸಂಸತ್ ಚುನಾವಣೆಯಲ್ಲೂ ಅಳವಡಿಸಿಕೊಳ್ಳಲಾಗಿತ್ತು. ಭವಿಷ್ಯದಲ್ಲಿ ಈ ಪದ್ಧತಿ ಭಾರತದಲ್ಲೂ ಜಾರಿಯಾದಲ್ಲಿ ಉತ್ತಮ - ದಿಲೀಪ್ ಕುಮಾರ್ ಸಂಪಡ್ಕ ಆನ್‌ಲೈನ್ ಮತದಾನವು ನಮ್ಮಲ್ಲಿ ಹೊಸ ಆಸಕ್ತಿಯನ್ನು ಮೂಡಿಸಿದೆ. ಭವಿಷ್ಯದಲ್ಲಿ ನಾವು ಯಾರು ಕೂಡ ಮತದಾನದಿಂದ ದೂರ ಸರಿಯುವುದಿಲ್ಲ. - ಕೆ.ಕೀರ್ತನ್, ಶಾಲಾ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net