

ಮಂಗಳೂರು: ರಾಜ್ಯದ ಎಲ್ಲ ಪ್ರಮುಖ ಚಾರಣಪಥಗಳ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಒಂದೇ ವೆಬ್‌ಸೈಟ್ ಮೂಲಕ ಜುಲೈ ಮೂರನೇ ವಾರದಲ್ಲಿ ಜಾರಿಯಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ವೆಬ್‌ಸೈಟ್ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಜುಲೈ 15ರೊಳಗೆ ಪೂರ್ಣಗೊಳ್ಳಲಿದೆ ಎಂದು ಪಡೀಲ್ ಅರಣ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
*ಯೋಜನೆ ವಿಸ್ತರಣೆ
ಪ್ರವಾಸಿಗರು ರಜಾದಿನದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಚಾರಣಪಥಗಳಿಗೆ ಭೇಟಿ ನೀಡುವುದರಿಂದ ಪರಿಸರ, ಪ್ರಕೃತಿ ಹಾಳಾಗುತ್ತಿರುವುದನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಈಗಾಗಲೇ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕೊಡಚಾದ್ರಿ, ಕುರಿಂಜಲ್, ಗಂಗಡಿಕಲ್, ನರಸಿಂಹ ಪರ್ವತಗಳಲ್ಲಿ ಅರಣ್ಯ ಇಲಾಖೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಅಲ್ಲದೆ ಎತ್ತಿನಭುಜ ಸಹಿತ ಕೆಲವು ಕಡೆಗಳಿಗೂ ಒಂದೇ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
*ಚಾರಣಿಗರ ಸಂಖ್ಯೆಗೆ ಮಿತಿ:
ಕೆಲವು ಪ್ರವಾಸಿ ಸಂಸ್ಥೆಗಳು(ಟೂರ್ ಆಪರೇಟರ್‌ಗಳು) ಚಾರಣಪಥಗಳ ಬಗ್ಗೆ ಯುವಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದ್ದು, ಇದರ ಪರಿಣಾಮ ಚಾರಣಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಅಗತ್ಯ. ಪ್ರತಿಯೊಂದು ಚಾರಣಪಥದಲ್ಲೂ ಅದರ ವಿಸ್ತಾರ, ಅಲ್ಲಿರುವ ಗೈಡ್ ಮತ್ತು ಇತರ ಮೂಲಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗುವುದು. ಯಾವುದೇ ಚಾರಣಪಥದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಚಾರಣಿಗರಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
*ಒತ್ತುವರಿಮುಕ್ತ ವೃತ್ತಕ್ಕೆ ಸೂಚನೆ:
ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಂಗಳೂರು ಅರಣ್ಯ ವೃತ್ತವನ್ನು ರಾಜ್ಯದಲ್ಲೇ ಅರಣ್ಯ ಜಮೀನು ಒತ್ತುವರಿಮುಕ್ತ ಎಂದು ಮೊದಲು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟು ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಿ ನೋಟಿಸ್ ಕಳುಹಿಸಲು, ಕೋರ್ಟ್‌ನಲ್ಲಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸುವಂತೆ ಈ ಹಿಂದೆಯೇ ಸೂಚಿಸಿದ್ದೆ, ಅದರಂತೆ ಕಾರ್ಯಪ್ರಗತಿ ಆಗುತ್ತಿದೆ ಎಂದರು.------
*150 ಹೆಕ್ಟೇರ್ ಕಾಂಡ್ಲಾವನ:
ಮಂಗಳೂರು ವೃತ್ತದಲ್ಲಿ 150 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾವನ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರದ ಮಂಜೂರಾತಿ ಪಡೆದು ಮುಂದಿನ ದಿನಗಳಲ್ಲಿ 10 ಲಕ್ಷ ಕಾಂಡ್ಲಾ ಗಿಡಗಳನ್ನು ನೆಡಲಾಗುವುದು. ಸಿಆರ್‌ಜಡ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ಕೋರ್ಟ್‌ನಲ್ಲಿ ಬಾಕಿ ಉಳಿದ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಿಸಲು ಸೂಚಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.