

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಕರೊನಾ ಆತಂಕದಿಂದಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಆನ್‌ಲೈನ್ ಕಿರುಪರೀಕ್ಷೆ (ಬಹು ಆಯ್ಕೆ ಪ್ರಶ್ನೆಪತ್ರಿಕೆ ಮಾದರಿ) ಆರಂಭಿಸಿದೆ.
ಖಾಸಗಿ ಶಾಲೆ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಯುತ್ತಿರುವುದರಿಂದ ಮಕ್ಕಳ ಪಾಲಕರು ಸದ್ಯಕ್ಕೆ ನಿರಾತಂಕದಲ್ಲಿದ್ದರೆ, ಸರ್ಕಾರಿ ಶಾಲೆಯ ಮಕ್ಕಳ ಪಾಲಕರು ಕಂಗಾಲಾಗಿದ್ದಾರೆ. ಇದನ್ನು ಮನಗಂಡ ಇಲಾಖೆ ಆಯಾ ಶಾಲಾ ಶಿಕ್ಷಕರ ಮೂಲಕ ಆನ್‌ಲೈನ್ ಕಿರುಪರೀಕ್ಷೆ ಆರಂಭಿಸಿದ್ದು, ವಿದ್ಯಾರ್ಥಿಗಳ ಮನಗೆಲ್ಲುವ ಜತೆಗೆ ಪಾಲಕರ ಆತಂಕ ದೂರ ಮಾಡಲು ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಪ್ರಶ್ನೆ ನೀಡಿ ಉತ್ತರ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನಿಗದಿಪಡಿಸಿದ ಅವಧಿಯಲ್ಲಿ ಉತ್ತರಿಸಿ ಆನ್‌ಲೈನಲ್ಲೇ ಉತ್ತರ ಪತ್ರಿಕೆ ಸಲ್ಲಿಸಿ ಅದನ್ನು ಪರಿಶೀಲಿಸಿ, ಸರಿ ಹಾಗೂ ತಪ್ಪು ಉತ್ತರಗಳ ಬಗ್ಗೆ ಸ್ಪಷ್ಟಪಡಿಸುವ ಕೆಲಸ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚಂದನ ವಾಹಿನಿಯೇ ಆಧಾರ: ಪ್ರಸ್ತುತ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ವಿದ್ಯಾಗಮ ಸಂವೇದ’ ಕಾರ್ಯಕ್ರಮವೊಂದೇ ಆಧಾರವಾಗಿದೆ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಠ್ಯವಿಷಯಗಳ ಬಗ್ಗೆ ಗೊಂದಲ ಅನುಮಾನಗಳಿದ್ದರೆ ಶಿಕ್ಷಕರೊಂದಿಗೆ ಮೊಬೈಲ್ ಮೂಲಕ ಸಂವಹನ ನಡೆಸುವ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾಗಮ ಚಟುವಟಿಕೆ ಪುನಾರವರ್ತನೆ: ವಿದ್ಯಾಗಮ ಯೋಜನೆಯಡಿ ನಡೆಸಲಾಗಿದ್ದ ಪಠ್ಯ ಚಟುವಟಿಕೆಗಳ ಪುನರಾವರ್ತನೆ ಕೆಲಸಕ್ಕೆ ಶಿಕ್ಷಕರು ಮುಂದಾಗಿದ್ದಾರೆ. ಆ್ಯ್ಲೈನ್‌ನಲ್ಲೂ ಶಿಕ್ಷಕರು ನೀಡಿದ ಪಠ್ಯಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಕೆಲವೊಂದು ವಿದ್ಯಾರ್ಥಿಗಳು ಗೂಗಲ್‌ಮೀಟ್ ಮೂಲಕವು ಪಠ್ಯಚಟುವಟಿಕೆ ನಡೆಸುತ್ತಿದ್ದಾರೆ.
15,136 ವಿದ್ಯಾರ್ಥಿಗಳು: ಪ್ರಸಕ್ತ ಸಾಲಿನಲ್ಲಿ ದೇವನಹಳ್ಳಿಯಲ್ಲಿ 3,520 ವಿದ್ಯಾರ್ಥಿಗಳು, ದೊಡ್ಡಬಳ್ಳಾಪುರದಲ್ಲಿ 4,089, ಹೊಸಕೋಟೆಯಲ್ಲಿ 4,326 ನೆಲಮಂಗಲ 3,201 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಎಲ್ಲ ಸರಿಹೋದರೆ ಇನ್ನೂ ನಾಲ್ಕೈದು ತಿಂಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಪರೀಕ್ಷೆ ಆರಂಭವಾಗಲಿದೆ. ಅಷ್ಟರಲ್ಲಿ ಎಲ್ಲ ಪಠ್ಯಗಳು ಮುಗಿದಿರಬೇಕು. ಆದರೆ ಕರೊನಾ ಕಾರಣದಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನೇರ ಸಂವಹನಕ್ಕೆ ಅವಕಾಶವಿಲ್ಲವಾಗಿದೆ.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆದ್ಯತೆ: ಸರ್ಕಾರದ ನಿರ್ದೇಶನದಂತೆ ಶಿಕ್ಷಕರು ಶಾಲೆಗೆ ಬಂದು ಹೋಗುತ್ತಿದ್ದಾರೆ. ವಿದ್ಯಾಗಮದಲ್ಲಿ ನಡೆದ ಪಠ್ಯಚಟುವಟಿಕೆಗಳು, ಆನ್‌ಲೈನ್ ಪರೀಕ್ಷೆ ಸೇರಿ ಶಾಲೆಗಳು ಪುನರಾರಂಭವಾದರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯಾವ ರೀತಿ ಬೋಧನೆ ಮಾಡಬೇಕೆಂಬ ಬಗ್ಗೆ ‘ಲೆಸನ್ ಪ್ಲಾನ್’ ತಯಾರಿ ಸಹ ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿ 2017-18ರಲ್ಲಿ 16ನೇ ಸ್ಥಾನದಲ್ಲಿತ್ತು, 2018-19ರಲ್ಲಿ 3ನೇ ಸ್ಥಾನಕ್ಕೇರಿತ್ತು. 2019-20ರಲ್ಲಿ ಆ ರಾಜ್ಯಕ್ಕೆ 2 ನೇ ಸ್ಥಾನ ಗಳಿಸುವಲ್ಲಿ ಯಶ ಕಂಡಿತ್ತು. ಪ್ರಸಕ್ತ 2020-21ನೇ ಸಾಲಿನಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕೆಂಬ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಪ್ರಮುಖವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಜಿಲ್ಲೆಯಾದ್ಯಂತ ಪ್ರತಿ ತಿಂಗಳ ಮೊದಲ ವಾರದಲ್ಲಿ ಆನ್‌ಲೈನ್ ಟೆಸ್ಟ್ (ಬಹು ಆಯ್ಕೆ ಪ್ರಶ್ನೆಪತ್ರಿಕೆ ಮಾದರಿ) ಯೋಜನೆ ರೂಪಿಸಲಾಗಿದೆ. ಪಠ್ಯವಿಷಯವಾಗಿ ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ಅನುಮಾನಗಳಿಗೆ ತಕ್ಷಣವೇ ೆನ್ ಮೂಲಕ ಸ್ಪಂದಿಸುವಂತೆ ಶಿಕ್ಷಕರಿಗೆ ಸೂಚಿಸಿದ್ದು, ಶಿಕ್ಷಕರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳು ಯಾವುದೇ ಅತಂಕಕ್ಕೊಳಗಾಗಬಾರದು. ಗಂಗಮಾರೇಗೌಡ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ