ಸರ್ಕಾರಿ ಅ್ಯಪ್ ಆಧಾರಿತ ಟ್ಯಾಕ್ಸಿ ಸೇವೆ: ಚಾಲಕರ ಸಂಘದ ಮಹಾಸಭೆಯಲ್ಲಿ ಬಿ.ಕೆ ಇಮ್ತಿಯಾಝ್ ಒತ್ತಾಯ

mng sep 12- taxi drivers
ದಕ್ಷಿಣ ಕನ್ನಡ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಸಂಘದ ಮಹಾಸಭೆ ಮಂಗಳೂರು ನಾಸಿಕ್ ಬಂಗೇರ ಸಭಾಭಾವನದಲ್ಲಿ ಮಂಗಳವಾರ ಜರುಗಿತು.
Published on

ಮಂಗಳೂರು: ಅ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಕಂಪೆನಿಗಳು ಚಾಲಕರಿಗೆ ಸರಿಯಾದ ಪ್ರಯಾಣ ದರ ನೀಡದೆ ವಂಚಿಸುತ್ತಿವೆ. ಬ್ಯಾಂಕ್ ಸಾಲ ಮಾಡಿ ಕಾರು ಖರೀದಿಸಿದ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ರೇಡಿಯೋ ಟ್ಯಾಕ್ಸಿ ಚಾಲಕರಿದ್ದು ಸಂಕಷ್ಟದಲ್ಲಿರುವ ಚಾಲಕರಿಗಾಗಿ ಮತ್ತು ಉತ್ತಮ ಸಾರ್ವಜನಿಕ ಸಾರಿಗೆ ಸೇವೆಗಾಗಿ ಸರ್ಕಾರವೇ ಅ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಸೇವೆ ಆರಂಭಿಸಬೇಕೆಂದು ಸಾಮಾಜಿಕ ಹೋರಾಟಗಾರ ಬಿ.ಕೆ ಇಮ್ತಿಯಾಝ್ ಒತ್ತಾಯಿಸಿದರು.
ನಗರದ ನಾಸಿಕ್ ಬಂಗೇರ ಸಭಾಭಾವನದಲ್ಲಿ ಮಂಗಳವಾರ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಸಂಘದ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಸಾರಿಗೆ ರಂಗದ ನೌಕರರ ಹೋರಾಟ ತೀವ್ರಗೊಳ್ಳುತ್ತಿದೆ. ಸರ್ಕಾರಕ್ಕೆ ಹೆಚ್ಚಿನ ರೀತಿಯಲ್ಲಿ ತೆರಿಗೆ ಪಾವತಿಸುವ ಸಾರ್ವಜನಿಕ ಸಾರಿಗೆ ರಂಗದ ಚಾಲಕರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿದ ಅವರು, ಮಂಗಳೂರು ನಗರದಲ್ಲಿ ಆನ್‌ಲೈನ್ ಟ್ಯಾಕ್ಸಿ ಚಾಲಕರು ದಿನದ 24ಗಂಟೆ ಸೇವೆಯಲ್ಲಿ ನಿರತರಾಗಿದ್ದಾರೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಆನ್‌ಲೈನ್ ಟ್ಯಾಕ್ಸಿ ಚಾಲಕರಿಗೆ ದೌರ್ಜನ್ಯ ನಡೆಸಲಾಗುತ್ತಿದೆ. ಆನ್‌ಲೈನ್ ಟ್ಯಾಕ್ಸಿ ಚಾಲಕರು ಒಗ್ಗಟ್ಟಾಗಿ ದಬ್ಬಾಳಿಕೆಯ ವಿರುದ್ಧ ಹೋರಾಟಕ್ಕಿಳಿಯಬೇಕೆಂದು ಅವರು ಕರೆ ನೀಡಿದರು.
ಸಂಘದ ಮುಖಂಡರಾದ ಮುನಾವ್ವರ್ ಕುತ್ತಾರ್, ಸಲ್ಮಾನ್, ನೆಲ್ಸನ್ ಮತ್ತಿತರರು ಮಾತನಾಡಿದರು.
ಸಂಘದ ಅಧ್ಯಕ್ಷ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಮೇಶ್ ನಾಯ್ಕ್, ಕರುಣಾಕರ, ಅಶ್ರಫ್ ಕಲ್ಲಡ್ಕ, ಜೋಸೆಫ್, ಸಾದಿಕ್ ಕಣ್ಣೂರು, ಶಾಕಿರ್ ಕಂಕನಾಡಿ, ಅಲ್ತಾಫ್ ಉಳ್ಳಾಲ, ಮುಸ್ತಫಾ ಕುತ್ತಾರ್, ಜಲೀಲ್, ಕಲೀಂ ಮದನಿ, ಅಜೀಜ್ ಅಡ್ಡೂರು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ನೌಶಾದ್ ಕಾವೂರು ಪ್ರಸ್ತಾವನೆಗೈದರು. ಇಮ್ತಿಯಾಜ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net