

ಹರೀಶ್ ಮೋಟುಕಾನ ಮಂಗಳೂರು
ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜನ ಸಾಮಾನ್ಯರ ಕಚೇರಿ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಬಹುತೇಕ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲು ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಬಿಲ್, ಉದ್ದಿಮೆ ಪರವಾನಗಿ ಆನ್‌ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಸಾಲಿಗೆ ಆಸ್ತಿ ತೆರಿಗೆ ಕೂಡ ಸೇರಲಿದೆ. ಇದರೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ಆನ್‌ಲೈನ್ ವ್ಯವಸ್ಥೆಗೆ ಒಗ್ಗಿಕೊಳ್ಳಲು ಮನಪಾ ನಿರ್ಧರಿಸಿದೆ. ಆಸ್ತಿ ತೆರಿಗೆ ಪಾವತಿಗೆ ಪ್ರತ್ಯೇಕ ಆ್ಯಪ್ ಕುರಿತಂತೆ ಕಿಯೋನಿಕ್ಸ್ ಸಂಸ್ಥೆ ಜತೆ ಮಾತುಕತೆ ನಡೆಸಲಾಗಿದ್ದು, ಆ್ಯಪ್ ಸಿದ್ದಗೊಳ್ಳುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ರೂಪುಗೊಂಡಿರುವ ನೀರಿನ ಬಿಲ್ ಆನ್‌ಲೈನ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಲಾಕ್‌ಡೌನ್ ವೇಳೆ ಅನೇಕ ಮಂದಿ ಪಾಲಿಕೆಗೆ ಬಂದು ನೀರಿನ ಬಿಲ್ ಪಾವತಿಸಲು ಕಷ್ಟವಾಗುತ್ತಿತ್ತು. ಈ ವೇಳೆ ಆನ್‌ಲೈನ್ ವ್ಯವಸ್ಥೆಯ ಲಾಭ ಪಡೆದಿದ್ದಾರೆ.
ಮನೆಯಲ್ಲಿ ಇಬ್ಬರಿದ್ದು ಕೆಲಸಕ್ಕೆ ತೆರಳುವ ಮಂದಿಗೆ ಪಾಲಿಕೆಗೆ ಆಗಮಿಸಿ ಹಣ ಪಾವತಿಸಲು ಕಷ್ಟವಾಗುವವರು ಇದರ ಲಾಭ ಪಡೆಯುತ್ತಿದ್ದಾರೆ. ಈ ಹಿಂದೆ ಉದ್ದಿಮೆ ಪರವಾನಗಿ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಈಗ ಆ್ಯಪ್ ಮೂಲಕ ಈ ಸೇವೆ ಪಡೆಯಬಹುದು. ಆ್ಯಪ್‌ನಲ್ಲಿ ಈಗಾಗಲೇ ಇರುವ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಲು ಪಾಲಿಕೆ ನಿರ್ಧರಿಸಿದೆ.
ಸ್ಮಾರ್ಟ್‌ಸಿಟಿಯಿಂದಲೂ ಪ್ರತ್ಯೇಕ ಆ್ಯಪ್: ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ‘ಒನ್ ಟಚ್ ಮಂಗಳೂರು’ ಎಂಬ ಆ್ಯಪ್ ಸಿದ್ಧಗೊಳ್ಳಲಿದೆ. ಸ್ಮಾರ್ಟ್ ಸಿಟಿ ಆಗುವ ಸ್ಥಳವನ್ನು ಕೇಂದ್ರೀಕರಿಸಿ ಈ ಆ್ಯಪ್ ಮುಖ್ಯವಾಗಿ ಕಾರ್ಯನಿರ್ವಹಿಸಿದರೂ ಪಾಲಿಕೆಯ 60 ವಾರ್ಡ್‌ಗಳಲ್ಲಿಯೂ ಇದು ಕಾರ್ಯಾಚರಿಸುವಂತೆ ಮಾಡಬೇಕು ಎನ್ನುವುದು ಸ್ಮಾರ್ಟ್‌ಸಿಟಿ ಆಶಯ. ಮಂಗಳೂರಿನಲ್ಲಿ ಇಂದು ನೀರಿಲ್ಲ, ವಿದ್ಯುತ್ ಇಲ್ಲ, ಕಸ ಸಂಗ್ರಹಕ್ಕೆ ಬರುವುದಿಲ್ಲ, ನಾಳೆ ಒಣ ಕಸ ಸಂಗ್ರಹಿಸುತ್ತೇವೆ ಸಹಿತ ವಿವಿಧ ರೀತಿಯ ಸಾರ್ವಜನಿಕ ಮಾಹಿತಿಗಳು ಮಂಗಳೂರು ಜನರ ಮೊಬೈಲ್‌ಗೆ ಬರಲಿದೆ. ಸಿಟಿ ಗೈಡ್, ಎಮರ್ಜೆನ್ಸಿ ಸರ್ವಿಸ್, ಕಟ್ಟಡ ಪರವಾನಗಿ, ಸೌಲಭ್ಯಗಳ ಮಾಹಿತಿ, ಪಾರ್ಕಿಂಗ್ ಸ್ಥಳಗಳು, ರಸ್ತೆಗಳ ಮಾಹಿತಿ, ನೀರಿನ ಸೌಲಭ್ಯದ ಮಾಹಿತಿ, ಉದ್ದಿಮೆ ಮಾಹಿತಿ, ಪಡಿತರ ವಿವರ, ಸಾರ್ವಜನಿಕ ಅಹವಾಲು, ದಂಡ ಕಟ್ಟುವ ವಿಧಾನ, ಉದ್ಯೋಗ ವಿವರ, ಜನ್ಮದಿನಾಂಕ ಪ್ರಮಾಣಪತ್ರ ವಿವರಗಳನ್ನು ಮೊಬೈಲ್ ಆ್ಯಪ್‌ನಲ್ಲಿ ನೀಡುವ ಕಡೆಗೆ ಪಾಲಿಕೆ ಯೋಜನೆ ರೂಪಿಸಿದೆ.
ಮಹಾನಗರ ಪಾಲಿಕೆಯಲ್ಲಿ ಆನ್‌ಲೈನ್ ವ್ಯವಸ್ಥೆಗೆ ಒತ್ತು ನೀಡಲಾಗುವುದು. ನೀರಿನ ಬಿಲ್ ಪಾವತಿ, ಉದ್ದಿಮೆ ಪರವಾನಗಿ ಪಡೆಯಲು ಈಗಾಗಲೇ ಡಿಜಿಟಲ್ ವ್ಯವಸ್ಥೆ ಇದೆ. ಸದ್ಯದಲ್ಲಿಯೇ ಆಸ್ತಿ ತೆರಿಗೆ ಕೂಡ ಆನ್‌ಲೈನ್ ಆಗಲಿದ್ದು, ಈಗಾಗಲೇ ಪ್ರತ್ಯೇಕ ಆ್ಯಪ್ ರೂಪುಗೊಳ್ಳುತ್ತಿದೆ. ಇನ್ನು ಪಾಲಿಕೆಯಲ್ಲಿ ಪೇಪರ್‌ಲೆಸ್ ವ್ಯವಸ್ಥೆಗೂ ಒತ್ತು ನೀಡಲಾಗುತ್ತಿದೆ.
ಪ್ರೇಮಾನಂದ ಶೆಟ್ಟಿ, ಮೇಯರ್