ಜಿಲ್ಲೆಯ ಸಹಕಾರಿ ರಂಗದ ಇತಿಹಾಸದಲ್ಲಿ ಇದೇ ಮೊದಲ ಪ್ರಯೋಗ ; 21ರಂದು ಆನ್‌ಲೈನ್ ಸಭೆ

17Tmk_DCC_Bank
Published on

ತುಮಕೂರು: ಸಹಕಾರಿ ರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಆನ್‌ಲೈನ್ ಸಭೆ ಆಯೋಜಿಸಲಾಗಿದೆ. ಜೂಮ್ ಆ್ಯಪ್, ಗೂಗಲ್ ಆ್ಯಪ್ ಬಳಸಿಕೊಂಡು ಈ ಬಾರಿಯ ಸರ್ವಸದಸ್ಯರ ಸಭೆಯನ್ನು ಸಹಕಾರಿ ಸಂಸ್ಥೆಗಳು ನಡೆಸುತ್ತಿರುವುದು ವಿಶೇಷವೆನಿಸಿದೆ. ಆದರೆ, ಚೀನಾ ರಾಷ್ಟ್ರದ ಜೂಮ್ ಆ್ಯಪ್ ಬಳಕೆ ಬಗ್ಗೆ ಅಪಸ್ವರ ಇದ್ದರೂ ಆರ್ಥಿಕ ಸಂಸ್ಥೆಗಳು ಆನ್‌ಲೈನ್ ಮೀಟಿಂಗ್‌ಗೆ ಬಳಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಸಹಕಾರಿ ಸಂಸ್ಥೆಗಳು ಈ ಬಾರಿ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಭೌತಿಕವಾಗಿ ಆಯೋಜಿಸುವ ಬದಲು ವಿಡಿಯೋ ಸಭೆ ಮೂಲಕ ಆಯೋಜಿಸುತ್ತಿವೆ. ಪ್ರತಿ ವರ್ಷ ಸೆಪ್ಟೆಂಬರ್ 25ರೊಳಗೆ ಸಹಕಾರಿ ಸಂಸ್ಥೆಗಳ ವಾರ್ಷಿಕ ಸರ್ವಸದಸ್ಯರ ಸಭೆ ಮುಗಿಸಲಾಗುತ್ತಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಡಿಸೆಂಬರ್ 25ರೊಳಗೆ ಸರ್ವಸದಸ್ಯರ ಸಭೆ ಮುಗಿಸುವ ಗಡುವಿನೊಳಗೆ ಎಲ್ಲ ಸಹಕಾರಿ ಸಂಸ್ಥೆಗಳು ವಾರ್ಷಿಕ ಸಭೆ ಆಯೋಜಿಸಿದ್ದು ಬಹುತೇಕ ಸಂಸ್ಥೆಗಳು ವರ್ಚುಯಲ್ ಸಭೆಗೆ ಮೊರೆ ಹೋಗಿವೆ.

ಜೂಮ್, ಗೂಗಲ್ ಆ್ಯಪ್ ಬಳಕೆ: ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಸಹಕಾರಿ ಸಂಘಗಳು, ಸೌಹಾರ್ದ ಬ್ಯಾಂಕ್‌ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಾರ್ಷಿಕ ಸಭೆ ಆಯೋಜಿಸಿವೆ. ಹೆಚ್ಚು ಜನರನ್ನು ಸಭೆಯಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಜೂಮ್ ಆ್ಯಪ್ ಹಾಗೂ ಗೂಗಲ್ ಆ್ಯಪ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ 2232 ಸಹಕಾರಿ ಸಂಸ್ಥೆಗಳಿವೆ. ಇದರಲ್ಲಿ 223 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ. ಉಳಿದ ಸಹಕಾರಿ ಸಂಸ್ಥೆಗಳಲ್ಲಿ 238 ಪ್ರಾಥಮಿಕ ಪತ್ತಿನ ಸಹಕಾರ ಸಂಘ, 1200 ಹಾಲು ಉತ್ಪಾದಕರ ಸಹಕಾರ ಸಂಘಗಳು ಆನ್‌ಲೈನ್ ಸಭೆ ಬದಲು ಭೌತಿಕ ಸಭೆ ನಡೆಸುತ್ತಿವೆ. ಇದಲ್ಲದೆ, 200-300 ಸದಸ್ಯರನ್ನೊಳಗೊಂಡ ಸೌಹಾರ್ದ ಸಂಸ್ಥೆಗಳು ಸಹ ಹೊಸ ತಂತ್ರಜ್ಞಾನಕ್ಕೆ ಅಪ್ಡೇಟ್ ಆಗುವ ಬದಲು ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಭೌತಿಕ ಸಭೆ ಆಯೋಜಿಸುತ್ತಿದ್ದು ಕರೊನಾ ಮಾರ್ಗಸೂಚಿ ಅನುಸರಿಸುತ್ತಿವೆ.

ಇನ್ನೂ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಸರ್ಕಾರದ ವಿಡಿಯೋ ಕಾನ್ಫರೆನ್ಸ್ ಮಾದರಿಯಲ್ಲಿ ವಾರ್ಷಿಕ ಸಭೆ ನಡೆಯುತ್ತಿದೆ. ಡಿ.21 ರಂದು ಡಿಸಿಸಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಇದ್ದು ಆಯಾ ತಾಲೂಕು ಕೇಂದ್ರಗಳ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಕನಿಷ್ಟ 25 ರಿಂದ 40 ಸದಸ್ಯರು ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ 32 ಇಂಚು ದೊಡ್ಡ ಎಲ್‌ಇಡಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಕರೊನಾ ಈ ಬಾರಿ ಎಲ್ಲರನ್ನೂ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವಂತೆ ಮಾಡಿದ್ದು ಆಯಾ ಸಹಕಾರಿ ಸಂಸ್ಥೆಗಳು ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಹೆಸರು, ಸದಸ್ಯತ್ವ ಸಂಖ್ಯೆ ನಮೂದಿಸಿ ವರ್ಚುಯಲ್ ಮೀಟಿಂಗ್‌ನಲ್ಲಿ ಭಾಗವಹಿಸಲು ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ.

ನಮ್ಮ ಬ್ಯಾಂಕ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರನ್ಸ್ ಮೂಲಕ ವಾರ್ಷಿಕ ಮಹಾಸಭೆ ಆಯೋಜಿಸಿದ್ದು, ನಾವು ಕಳುಹಿಸಿರುವ ಲಿಂಕ್ ಬಳಸಿಕೊಂಡು 3 ಸಾವಿರಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಜೂಮ್ ಆ್ಯಪ್ ಗ್ರಾಹಕ ಸ್ನೇಹಿ ಎನಿಸಿದೆಯಾದರೂ ಮಾಹಿತಿ ಸೋರಿಕೆ ಆಗುವ ಆತಂಕವೂ ಇದೆ. ಕೆ.ಜೆ.ರುದ್ರಪ್ಪ ಅಧ್ಯಕ್ಷ, ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಸಹಕಾರಿ ಸಂಸ್ಥೆಗಳು ಸೆ.25ರೊಳಗೆ ವಾರ್ಷಿಕ ಮಹಾಸಭೆ ಪೂರ್ಣಗೊಳಿಸಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ 2 ತಿಂಗಳು ವಿಸ್ತರಣೆ ಮಾಡಿದ್ದು ಡಿ.25ರೊಳಗೆ ವಾರ್ಷಿಕ ಸಭೆ ಮುಗಿಸಬೇಕಿದೆ. ಈ ಬಾರಿ ಹೆಚ್ಚು ಸದಸ್ಯರನ್ನು ಹೊಂದಿರುವ ಸೊಸೈಟಿಗಳು, ಸಹಕಾರಿ ಬ್ಯಾಂಕ್‌ಗಳು ವರ್ಚುಯಲ್ ಮೀಟಿಂಗ್ ಆಯೋಜಿಸುತ್ತಿವೆ. ಇದಕ್ಕೆ ನಮ್ಮ ಅನುಮತಿಯ ಅಗತ್ಯವಿಲ್ಲ. ಸಹಕಾರಿಗಳಿಗೆ ಇದು ವಿಶೇಷವೆನಿಸಿದೆ. ಕಾಂತರಾಜು ಉಪನಿಬಂಧಕರು, ಜಿಲ್ಲಾ ಸಹಕಾರಿ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net