ಆನ್​ಲೈನ್​ನಲ್ಲೇ ನವ ಜೋಡಿಗೆ ಶುಭ ಹಾರೈಕೆ

marriage
Published on

ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಮದುವೆಗಳು ಸರಳವಾಗಿ ನೆರವೇರುತ್ತಿದ್ದು, ವಿಡಿಯೋ ಕಾಲ್​ನಲ್ಲಿ ನವಜೋಡಿಯನ್ನು ಸಂಬಂಧಿಕರು ಕಣ್ತುಂಬಿಕೊಂಡು ಶುಭ ಹಾರೈಸಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ನಡೆದ ಬೆಂಗಳೂರು ಮೂಲದ ಇಂಡಿಗೋ ವಿಮಾನ ಸಂಸ್ಥೆಯ ಪೈಲಟ್ ಮದುವೆಯ ಅನುಭವವನ್ನು ಕುಟುಂಬ ಸದಸ್ಯರು ಹಂಚಿಕೊಂಡಿದ್ದಾರೆ.

ಪುತ್ರ ಪೈಲಟ್ ಸಮೀರ್ ವರ್ವ (28) ಮತ್ತು ಅಕ್ಸೆಂಚರ್ ಕಂಪನಿ ಉದ್ಯೋಗಿ ಗುರುಗ್ರಾಮ ಮೂಲದ ಆಯುಶಿ ಕಟಾರಿಯಾ (27) ಮದುವೆಗೆ ಬೆಂಗಳೂರಿನ ನಿವಾಸಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಇಂಡಿಗೋದ ಹಿರಿಯ ಕ್ಯಾಪ್ಟನ್ ರೋಹಿತ್ ವರ್ವ ಮತ್ತು ಕಿರಣ್ ವರ್ವ ದಂಪತಿ ನಿಶ್ಚಯಿಸಿದ್ದರು.

ಗುರುಗ್ರಾಮದಲ್ಲಿ ಆಯುಶಿ ಕುಟುಂಬದ ಮನೆಯ ಸಮೀಪದಲ್ಲೇ ಸಮೀರ್ ವಾಸವಾಗಿದ್ದಾರೆ. ಮದುವೆಯನ್ನು ಮೂರು ದಿನ ಅದ್ದೂರಿಯಾಗಿ ಮಾಡಬೇಕೆಂದು ಕುಟುಂಬ ಸದಸ್ಯರು ಸಿದ್ಧತೆ ನಡೆಸಿದ್ದರು. ದೆಹಲಿಯ ರೆಸಾರ್ಟ್​ನಲ್ಲಿ ಮದುವೆ, ವರನ ಸ್ವಗೃಹ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಪೂಜಾ ಕಾರ್ಯ ನಿಗದಿಯಾಗಿತ್ತು. ಆಸ್ಪ್ರೇಲಿಯಾ, ಬೆಲ್ಜಿಯಂನ ಅತಿಥಿಗಳು ಸೇರಿ ನೂರಾರು ಸ್ನೇಹಿತರು, ಸಂಬಂಧಿಕರು ಭಾಗವಹಿಸುವ ನಿರೀಕ್ಷೆಯಿತ್ತು. ಅಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಗಿ ಸಮೀರ್ ಗುರುಗ್ರಾಮದಲ್ಲಿಯೇ ಉಳಿಯಬೇಕಾಯಿತು. ಲಾಕ್​ಡೌನ್ ಮುಗಿಯುವ ಲಕ್ಷಣ ಕಂಡುಬಾರದ ಕಾರಣ ಕುಟುಂಬಸ್ಥರು ಸಂಬಂಧಿಕರ ಅನುಪಸ್ಥಿತಿಯಲ್ಲೇ ಮದುವೆ ನೆರವೇರಿಸಲು ನಿರ್ಧರಿಸಿದರು.

ಸ್ಥಳೀಯ ಜಿಲ್ಲಾಡಳಿತದಿಂದ ಅನುಮತಿ ಪಡೆದು ಮೇ 6ರಂದು ಗುರುಗ್ರಾಮದಲ್ಲಿ ಮದುವೆ ನಡೆಸಿದರು. ವಧು-ವರ, ವಧುವಿನ ಪಾಲಕರು, ಫೋಟೋಗ್ರಾಫರ್ ಮತ್ತು ಪುರೋಹಿತರು ಮಾತ್ರವೇ ಭಾಗವಹಿಸಿದ್ದರು. ಬೆಂಗಳೂರು, ಚಂಡೀಗಢ, ಫರಿದಾಬಾದ್, ನೋಯಿಡಾ, ಜೈಪುರ, ಪುಣೆ, ಸಿಂಗಾಪುರ ಸೇರಿ ಇತರೆಡೆಯಿಂದ 35 ಸಂಬಂಧಿಕರು ಆನ್​ಲೈನ್ ಮುಖಾಂತರ ಮದುವೆಯಲ್ಲಿ ಭಾಗವಹಿಸಿದ್ದರು.

ಸಿಂಗಾಪುರದಲ್ಲಿರುವ ನನ್ನ ಹಿರಿಯ ಮಗ, ಸೊಸೆ ಮತ್ತು ಮೊಮ್ಮಗ ಕೂಡ ವಿಡಿಯೋ ಕಾಲ್​ನಲ್ಲಿ ಸಮೀರ್ ಮದುವೆ ಕಣ್ತುಂಬಿಕೊಂಡರು. ಚಿಕ್ಕಪ್ಪನ ಮದುವೆ ನೋಡಲು ನನ್ನ ಮೊಮ್ಮಗ ಮೊಬೈಲ್ ಪರದೆಗೆ ಅಂಟಿಕೊಂಡಿದ್ದ. ನಾವು ಕೂಡ ಮದುವೆಗೆ ಹೋಗಲು ಆಗಲಿಲ್ಲ ಎಂದು ಸಮೀರ್ ತಾಯಿ ಕಿರಣ್ ವಿವರಿಸಿದರು. ನವಜೀವನಕ್ಕೆ ಕಾಲಿಟ್ಟ ದಂಪತಿಗೆ ಆನ್​ಲೈನ್​ನಲ್ಲಿ ವರನ ಪಾಲಕರು ಶುಭ ಕೋರಿದರು. ವಾಟ್ಸ್​ಆಪ್ ವಿಡಿಯೋ ಕಾಲ್​ನಲ್ಲೇ ವರನ ತಾಯಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net