ಆನ್‌ಲೈನ್‌ನಲ್ಲಿ ಜೀವ ವಿಮೆ ಪಾವತಿಸಿ ಲಕ್ಷ ರೂ. ಕಳೆದುಕೊಂಡ !

1 smg 1
Published on

ಶಿವಮೊಗ್ಗ: ಆನ್‌ಲೈನ್ ಮೂಲಕ ಜೀವ ವಿಮೆ ಪಾವತಿಸಲು ಮುಂದಾದ ವ್ಯಕ್ತಿಯೊಬ್ಬರು ಬರೋಬ್ಬರಿ 1.01 ಲಕ್ಷ ರೂ. ಕಳೆದುಕೊಂಡಿದ್ದಾರೆ.

ನಗರದ ಕೆ.ಆರ್.ಪುರಂ ನಿವಾಸಿ ಆಶಿಶ್ ವಂಚನೆಗೆ ಒಳಗಾದವರು. ಅವಿವಾ ಲೈಫ್ ಇನ್ಸುರೆನ್ಸ್ ಕಂಪನಿಯಲ್ಲಿ ಜೀವ ವಿಮಾ ಪಾಲಿಸಿ ಮಾಡಿಸಿದ್ದರು. ಆದರೆ ಕಾರಣಾಂತರಗಳಿಂದ ನಾಲ್ಕು ವರ್ಷದಿಂದ ವಿಮಾ ಕಂತು ಕಟ್ಟಿರಲಿಲ್ಲ. ಇತ್ತೀಚೆಗೆ ಆಶಿಶ್ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತನೊಬ್ಬ ವಿಮಾ ಕಂಪನಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಎಂಟು ವರ್ಷದಿಂದ ವಿಮೆ ಕಂತು ಕಟ್ಟಿದ್ದೀರಿ. ಇನ್ನೆರಡು ವರ್ಷ ಕಂತು ಕಟ್ಟಿದ್ದರೆ ನಿಮ್ಮ ಕೈಗೆ ಮೆಚ್ಯುರಿಟಿ ಹಣ ಸಿಗಲಿದೆ ಎಂದು ನಂಬಿಸಿದ್ದ. ಆತನ ಮಾತು ನಂಬಿದ ಆಶಿಶ್ ಆನ್‌ಲೈನ್ ಮೂಲಕ ತಮ್ಮ ಮತ್ತು ತಾಯಿಯ ಬ್ಯಾಂಕ್ ಖಾತೆಯಿಂದ 52,564.72 ರೂ. ಪಾವತಿಸಿದ್ದಾರೆ.

ಬಳಿಕ ಮತ್ತೆ ಕರೆ ಮಾಡಿದ್ದ ಅಪರಿಚಿತ ಶೇ.15ರಷ್ಟು ಜಿಎಸ್‌ಟಿ ತುಂಬದಿದ್ದರೆ ನಿಮಗೆ ಬರುವ ವಿಮಾ ಹಣದಲ್ಲಿ ಶೇ.30ರಷ್ಟು ಕಡಿತ ಆಗಿ ಕೈಗೆ ಸೇರಲಿದೆ ಎಂದು ಹೆದರಿಸಿದ್ದಾನೆ. ಇದರಿಂದ ಆತಂಕಗೊಂಡ ಆಶಿಶ್ ಮತ್ತೆ 49,259.72 ರೂ. ಪಾವತಿಸಿದ್ದಾರೆ. ಬಳಿಕ ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬಂದಿದ್ದು ಅಪರಿಚಿತನ ಪತ್ತೆ ಮಾಡಿ ಹಣ ಕೊಡಿಸುವಂತೆ ಸಿಇಎನ್ ಠಾಣೆ ಪೊಲೀಸರಿಗೆ ಆಶಿಶ್ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net