

ಬೆಳಗಾವಿ: ಲಾಕ್‌ಡೌನ್ ಅವಧಿಯಲ್ಲಿಯೂ ಕಲಿಕಾ ಪ್ರಕ್ರಿಯೆಯನ್ನು ಮುಂದುವರಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಪರ್ಯಾಯ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಅನುಸರಿಸಿದ ಆನ್‌ಲೈನ್ ಉಪನ್ಯಾಸ ಗರಿಷ್ಠ ವಿದ್ಯಾರ್ಥಿಗಳನ್ನು ತಲುಪಲು ಯಶಸ್ವಿಯಾಗಿದೆ.
ಶೇ. 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಶೇ. 95ರಷ್ಟು ವಿದ್ಯಾರ್ಥಿಗಳು ಸಿಐಇ (ನಿರಂತರ ಆಂತರಿಕ ಮೌಲ್ಯಮಾಪನ) ಅಂದರೆ ಆಂತರಿಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಅಲ್ಲದೆ, ಆನ್‌ಲೈನ್ ಮೂಲಕ ತಮ್ಮ ಕಾರ್ಯಯೋಜನೆ (ಅಸೈನ್ಮೆಂಟ್)ಗಳನ್ನು ಸಲ್ಲಿಸಿದ್ದಾರೆ ಎಂದು ಮಹಾವಿದ್ಯಾಲಯಗಳಿಂದ ಪಡೆದ ಅಂಕಿ- ಅಂಶಗಳು ಪ್ರತಿಬಿಂಬಿಸುತ್ತಿವೆ.
ಈ ಯೋಜನೆಗಳನ್ನು ರಾಜ್ಯಾದ್ಯಂತ ಎಲ್ಲ ಇಂಜಿನಿಯ ರಿಂಗ್ ಕಾಲೇಜುಗಳ ಪ್ರಾಂಶುಪಾಲರು ದೃಢಪಡಿಸಿದ್ದಾರೆ ಎಂದು ವಿಟಿಯು ಕುಲಸಚಿವ ಡಾ.ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ಕಾಲೇಜುಗಳಲ್ಲಿ ತರಗತಿ ಮೂಲಕ ಶೇ. 20ರಿಂದ 30ರಷ್ಟು ಪಠ್ಯಕ್ರಮ ಪೂರ್ಣ ಗೊಂಡಿತ್ತು. ಆದರೆ, ಲಾಕ್‌ಡೌನ್ ನಂತರ ಆನ್‌ಲೈನ್ ಮೂಲಕ ಸುಮಾರು ಶೇ. 40ರಿಂದ 45ರಷ್ಟು ಪಠ್ಯಕ್ರಮ ಪೂರ್ಣಗೊಳಿಸಲಾಗಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಶೇ. 70ರಿಂದ 75ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ. ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ಸೂಚಿಸಿದ್ದು, ಈ ತರಗತಿಗಳು ಜೂನ್ 15ರ ವರೆಗೆ ಪ್ರಗತಿಯಲ್ಲಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
ಆನ್‌ಲೈನ್ ಉಪನ್ಯಾಸದಲ್ಲಿ ವಿಟಿಯು ಮುಂಚೂಣಿ ವಿಟಿಯು ಆಯಾ ಕಾಲೇಜುಗಳಲ್ಲಿನ ಡಿಜಿಟಲ್ ತರಗತಿ ವೇದಿಕೆಗಳ ತಯಾರಿ ಪ್ರಾಂಶುಪಾಲರ ಮೂಲಕ ಸಮೀಕ್ಷೆ ನಡೆಸಿದೆ. ಅವಶ್ಯ ಸಾಧನಗಳನ್ನು ಹೊಂದಿರುವ ವಿದ್ಯಾರ್ಥಿಗಳು, ಹಾಗೂ ಆ ಪ್ರದೇಶಗಳಲ್ಲಿ ನೆಟ್‌ವರ್ಕ್ ಲಭ್ಯತೆ ಸೇರಿ ಹಲವು ಮುಖ್ಯ ಅಂಶಗಳ ಮೇಲೆ ಸಮೀಕ್ಷೆ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಕಾಲೇಜುಗಳು ನೀಡಿರುವ ವರದಿಯಂತೆ ಶೇ. 80ರಿಂದ 85ರಷ್ಟು ವಿದ್ಯಾರ್ಥಿಗಳು ಡಿಜಿಟಲ್ ಸ್ವರೂಪದ ಕಲಿಕಾ ವಿಧಾನಕ್ಕೆ ತಯಾರಾಗಿರುವುದು ತಿಳಿದುಬಂದಿದೆ.
10,200 ಆನ್‌ಲೈನ್ ಉಪನ್ಯಾಸಗಳು ಅಪ್ಲೋಡ್: ವಿಶ್ವವಿದ್ಯಾಲಯ ಇ-ಲರ್ನಿಂಗ್ ಘಟಕವು ತನ್ನದೆಯಾದ ಯೂಟ್ಯೂಬ್ ಚಾನಲ್ ಆರಂಭಿಸಿದೆ. ವಿಟಿಯು ವಿದ್ಯಾರ್ಥಿಗಳಿಗಾಗಿ ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಪರಿಣತ ಶಿಕ್ಷಕರಿಂದ ಪಾಠ ಮಾಡಿಸಿದ 322 ಕೋರ್ಸ್‌ಗಳಿಗೆ ಸಂಬಂಧಿಸಿದ 10,200 ಉಪನ್ಯಾಸಗಳನ್ನು ಅಪ್ಲೋಡ್ ಮಾಡಲಾಗಿದೆ. ಅಧೀನ ಕಾಲೇಜುಗಳಿಗೂ ಅಪ್ಲೋಡ್ ಮಾಡಲು ಸೂಚಿಸಲಾಗಿತ್ತು. ಆ ಪ್ರಕಾರ ಸಾಕಷ್ಟು ಕಾಲೇಜುಗಳು ಯೂಟ್ಯೂಬ್ ಚಾನಲ್ ಆರಂಭಿಸಿ ಅದರಲ್ಲಿ ತರಗತಿಗಳನ್ನು ಅಪ್ಲೋಡ್ ಮಾಡಿದ್ದಾರೆ. ಎರಡು ತಿಂಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿವೆ ಎಂದು ಕುಲಸಚಿವ ಡಾ.ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ.