

ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ ಅವರ ನಿವಾಸದಲ್ಲಿ ಶನಿವಾರ ನಡೆದಿದ್ದ ದರೋಡೆ ಯತ್ನದ ಪ್ರಕರಣದ ಆರೋಪಿಗಳು ಸಾಲದ ಸಂಕಷ್ಟದಿಂದ ಹೊರ ಬರಲು ಕೃತ್ಯ ಎಸಗಿರುವುದಾಗಿ ತನಿಖೆ ಸಂದರ್ಭ ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ ಕೃತ್ಯ ಎಸಗಲು ಯೂಟ್ಯೂಬ್ನಲ್ಲಿ ಮಾಹಿತಿ ಸಂಗ್ರಹಿಸಿದ್ದರು ಎಂಬುದು ತಿಳಿದು ಬಂದಿದೆ.
ಆರೋಪಿಗಳಲ್ಲಿ ವೈ.ಮೋಹನ್ ದಂಟರಮಕ್ಕಿ ಮೂಲದ ಗಾರೆ ಕೆಲಸಗಾರ. ಇನ್ನೋರ್ವ ಆರೋಪಿ ಸಿ.ಎಂ.ಸಚಿನ್ ಚಂದ್ರಕಟ್ಟೆಯ ನಿವಾಸಿಯಾಗಿದ್ದು ಆಟೋಚಾಲಕನಾಗಿದ್ದ. ಇಬ್ಬರೂ ಸಾಲ ಮಾಡಿಕೊಂಡಿದ್ದರು. ಚಂದ್ರೇಗೌಡ ಅವರು ಇತ್ತೀಚೆಗೆ ಆಸ್ತಿ ವ್ಯವಹಾರ ನಡೆಸಿದ್ದು ಈ ವಿಚಾರ ಅವರ ಸಂಬಂಧಿಯೇ ಆದ ಸಿ.ಎಂ.ಸಚಿನ್ಗೆ ತಿಳಿದಿತ್ತು. ವ್ಯವಹಾರದ ಹಣ ಮನೆಯಲ್ಲಿರಬಹುದೆಂದು ಇಬ್ಬರೂ ಸೇರಿ ದರೋಡೆಗೆ ಸ್ಕೆಚ್ ಹಾಕಿದ್ದರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಎಂ.ಎಚ್.ಅಕ್ಷಯ್ ಮಾಹಿತಿ ನೀಡಿದರು.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಂದ್ರೇಗೌಡ ಹಾಗೂ ಪುತ್ರ ಶಿವಪ್ರಸಾದ್ ಹೊರಹೋದ ಸಂದರ್ಭ ಸಾಧಿಸಿ ಆರೋಪಿಗಳು ಮನೆಗೆ ನುಗ್ಗಿದರು. ಅಷ್ಟರಲ್ಲಿ ಮನೆಗೆ ಮರಳಿದ ಶಿವಪ್ರಸಾದ್ ಅವರು ತಾಯಿ ಕಟ್ಟಿಹಾಕಿದ ಸ್ಥಿತಿಯಲ್ಲಿದ್ದುದನ್ನು ಗಮನಿಸಿ ಬೊಬ್ಬೆ ಹಾಕಿದಾಗ ಸಾರ್ವಜನಿಕರು ಆಗಮಿಸಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿಗಳ ಬೈಕ್ಗೆ ಅಗ್ನಿಶಾಮಕ ದಳದ ಚಾಲಕ ವಾಹನ ಅಡ್ಡಗಟ್ಟಿದ್ದರಿಂದ ಆರೋಪಿಗಳನ್ನು ಸೆರೆ ಹಿಡಿಯಲು ಸಹಕಾರಿಯಾಯಿತು. ಇಲ್ಲದಿದ್ದಲ್ಲಿ ಆರೋಪಿಗಳು ಆ ತಕ್ಷಣಕ್ಕೆ ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು ಎಂದರು.
ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸರ್ಕಲ್ ಇನ್ಸ್ಪೆಕ್ಟರ್ ವಿನೋದ್ ಭಟ್ ಹಾಗೂ ನಗರ ಠಾಣೆ ಪಿಎಸ್ಐ ಗುರುಪ್ರಸಾದ್ ನೇತೃತ್ವದಲ್ಲಿ ಎರಡು ತಂಡ ರಚಿಸಲಾಯಿತು. ಪಿಎಸ್ಐಗಳಾದ ಎಚ್.ಆರ್.ವಿನುತಾ, ಮೌನೇಶ್, ಧನಂಜಯ, ಸಿಬ್ಬಂದಿ ಲೋಹಿತ್, ಶಶಿಧರ್, ಪ್ರವೀಣ್ ಕಾರ್ಯಾಚರಣೆಗಿಳಿದು ಸಾರ್ವಜನಿಕರ ನೆರವಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ವಿವರಿಸಿದರು.
ಯುಟ್ಯೂಬ್ನಲ್ಲಿ ಅನ್ವೇಷಣೆ: ದರೋಡೆ ಯತ್ನ ಪ್ರಕರಣದಲ್ಲಿ ಕೃತ್ಯ ಎಸಗಲು ಯುಟ್ಯೂಬ್ನಲ್ಲಿ ಮಾಹಿತಿ ಅನ್ವೇಷಣೆ ಮಾಡಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ವಾರದಿಂದ ತರಬೇತಿ ಪಡೆದುಕೊಂಡಿದ್ದು, ಕೃತ್ಯದಲ್ಲಿ ತಮ್ಮ ಜಾಡು ಸಿಗದಂತೆ ಜಾಕೆಟ್, ಶೂ ಖರೀದಿ ಮಾಡಿದ್ದಾರಲ್ಲದೆ, ನಂಬರ್ ಪ್ಲೇಟ್ ಇಲ್ಲದೆ ಬೈಕ್ ಬಳಸಲು ಸಿದ್ಧತೆ ನಡೆಸಿದ್ದರು. ಜತೆಗೆ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯಲ್ಲಿ ಬಿಟ್ಟು ಹೋಗಿದ್ದ ಚೀಲದಲ್ಲಿ ಖಾರಪುಡಿ, ಬಾಗಿಲ ಬೋಲ್ಟ್ ಮುರಿಯಲು ಬಳಸಬಹುದಾದ ಕಬ್ಬಿಣದ ಸಲಾಕೆ, ಅಗತ್ಯ ಬಿದ್ದಲ್ಲಿ ಉಸಿರು ಕಟ್ಟಿಸಲು ಅನುಕೂಲವಾಗುವಂತೆ ದಿಂಬು ಸಹ ಇರಿಸಿಕೊಂಡಿದ್ದರು. ದುಷ್ಕೃತ್ಯ ಎಸಗುವ ಬಗ್ಗೆ ಪರಿಣತಿ ಇಲ್ಲದಿದ್ದರೂ ಒಂದು ವೇಳೆ ಆರೋಪಿಗಳು ಪರಾರಿಯಾಗಿದ್ದರೆ ಅವರ ಜಾಡು ಹಿಡಿಯುವುದೇ ಕಷ್ಟವಾಗುತ್ತಿತ್ತು.
ಚಾಲಕ, ಪೊಲೀಸರಿಗೆ ಸನ್ಮಾನ: ಆರೋಪಿಗಳು ಬೈಕ್ನಲ್ಲಿ ಪರಾರಿಯಾಗುವ ಯತ್ನದಲ್ಲಿದ್ದಾಗ ಸಮಯ ಪ್ರಜ್ಞೆ ಪ್ರದರ್ಶಿಸಿ ಬೈಕ್ಗೆ ತಡೆಯೊಡ್ಡಿದ ಅಗ್ನಿಶಾಮಕ ದಳದ ಚಾಲಕ ಎಚ್.ಕೆ.ದೇವೇಂದ್ರಪ್ಪ ಅವರಿಗೆ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅಕ್ಷಯ್ ಸನ್ಮಾನಿಸಿ ನಗದು ಬಹುಮಾನ ನೀಡಿದರು. ಘಟನೆ ನಡೆದ ಎರಡು ಗಂಟೆಗಳ ಅವಧಿಯಲ್ಲೇ ಬಂಧಿಸಿದ ಪೊಲೀಸರ ತಂಡಗಳನ್ನು ಅಭಿನಂದಿಸಿ ಬಹುಮಾನ ನೀಡಿದರು. ಡಿವೈಎಸ್ಪಿ ಡಿ.ಟಿ.ಪ್ರಭು, ಸಿಪಿಐ ವಿನೋದ್ ಭಟ್, ಡಿಸಿಐಬಿ ಇನ್ಸ್ಪೆಕ್ಟರ್ ಕೆ.ಸತ್ಯನಾರಾಯಣ್, ನಗರ ಠಾಣಾಧಿಕಾರಿ ಎನ್.ಗುರುಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.