

ಭಟ್ಕಳ: ಆನ್‌ಲೈನ್ ಗೇಮ್‌ನ ಗೀಳಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ತಾಲೂಕಿನ ಸಾಗರ ರಸ್ತೆಯ ನಿವಾಸಿ ಮೊಹಮದ್ ನಿಹಾಲ್(19) ಮೃತ ಯುವಕ. 19 ರಂದು ಪಾನಿಪುರಿಯ ಜತೆ ಇಲಿ ಪಾಶಾಣ ಸೇರಿಸಿ ಸೇವಿಸಿದ್ದ ಆತ ತೀವ್ರವಾಗಿ ಅಸ್ವಸ್ಥನಾಗಿದ್ದ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಣಿಪಾಲ ಆಸ್ಪತ್ರೆಗೆ ಹಾಗೂ ನಂತರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಏ.13 ರಂದು ಆತ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಆತನ ಮಾವನ ಮಗ ಉಮರ್ ಫಾರುಕ್ ಮೊಹಮದ್ ಹಮ್ಜಾ ಭಟ್ಕಳ ಶಹರ ಠಾಣೆಗೆ ದೂರು ನೀಡಿದ್ದಾರೆ.
ಮೊಹಮದ್ ನಿಹಾಲ್ 2-3 ವರ್ಷಗಳಿಂದ ಮೊಬೈಲ್ ಗೇಮ್‌ನ ಗೀಳಿಗೆ ಒಳಗಾಗಿದ್ದ. ಅದರಿಂದ ಹಣ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಕೆಲ ದಿನ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.