

ಚಿಕ್ಕಬಳ್ಳಾಪುರ: ಪೊಲೀಸ್ ಬಡಾವಣೆಯಲ್ಲಿ ಮುಖ್ಯಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.
ಮಂಚೇನಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜಶೇಖರ್ (46) ಮೃತ. ಬಡಾವಣೆಯಲ್ಲಿನ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಹಲವು ತಿಂಗಳಿಂದಲೂ ಆನ್ ಲೈನ್ ನಲ್ಲಿ ಜೂಜಾಟವಾಡುತ್ತ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಕುಟುಂಬಸ್ಥರ ಒಡವೆಗಳನ್ನು ಅಡ ಇಟ್ಟಿದ್ದು ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದರು. ಇದರ ನಡುವೆ ಸಾಲದ ಕಿರುಕುಳ ಹೆಚ್ಚಾಗಿದ್ದರಿಂದ ಜುಗುಪ್ಸೆಗೊಳಗಾಗಿದ್ದರು. ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಮಂಚೇನಹಳ್ಳಿಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಪೊಲೀಸಪ್ಪನಿಗೆ ಕಿರುಕುಳ*
ಪ್ರತಿದಿನ ವಿವಿಧ ಠಾಣೆಗಳಲ್ಲಿ ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗುತ್ತಿವೆ. ದೂರು ನೀಡುವ ಸಂದರ್ಭದಲ್ಲಿ ಮೃತರ ಸಂಬಂಧಿಕರು ನಡೆದ ಘಟನೆಯನ್ನು ವಿವರಿಸಿ ಅಳಲು ತೋಡಿಕೊಳ್ಳುವಂತಹುದಾಗುತ್ತಿದೆ. ಇಂತಹ ಪ್ರಕರಣಗಳ ತನಿಖೆಯಾಗುತ್ತಿದೆ. ಇದರ ನಡುವೆ ಕೆಲ ಪೊಲೀಸ್ ಸಿಬ್ಬಂದಿ ಆನ್ ಲೈನ್ ಜೂಜಿನಲ್ಲಿ ತೊಡಗಿಸಿಕೊಂಡು ಸ್ವತಃ ನಷ್ಟ ಅನುಭವಿಸುತ್ತಿದ್ದಾರೆ. ಹಾಗೆಯೇ ದೂರುದಾರರ ರೀತಿ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಬ್ಯಾಂಕು, ಖಾಸಗಿ ಲೇವಾದೇವಿದಾರರೊಂದಿಗೆ ಆಸ್ತಿಪಾಸ್ತಿ, ಒಡವೆಗಳನ್ನು ಅಡ ಇಟ್ಟು ಪಡೆದುಕೊಂಡ ಸಾಲದ ಹಣವನ್ನು ನಿಯಮಾನುಸಾರ ಪಾವತಿಸಬೇಕು. ಇಲ್ಲದಿದ್ದಲ್ಲಿ ಲೀಗಲ್ ನೋಟಿಸ್, ಚೆಕ್ ಬೌನ್ಸ್ ಸೇರಿದಂತೆ ಕಾನೂನು ಕ್ರಮ ಎದುರಿಸಬೇಕು. ಇದರ ಅವಮಾನದಿಂದ ಬೇರೆ ವಿಧಿಯಿಲ್ಲದೇ ಆತ್ಮಹತ್ಯೆಗೆ ಶರಣಾಗುವಂತಹುದಾಗುತ್ತಿದೆ. ಇದರಲ್ಲಿ ಜನರ ಜತೆಗೆ ಪೊಲೀಸರೇ ಕಿರುಕುಳ ಅನುಭವಿಸುತ್ತಿದ್ದಾರೆ.
*ಎಸ್ಪಿ ಕ್ರಮ ಕೈಗೊಳ್ಳಬೇಕು*
ಸಾಮಾಜಿಕ ಜಾಲತಾಣ, ಜಾಗೃತಿ ಕಾರ್ಯಕ್ರಮಗಳ ಮೂಲಕ ಸೈಬರ್ ಅಪರಾಧ, ಜೇಬುಗಳ್ಳತನ, ಸರಗಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯು ಜಾಗೃತಿ ಮೂಡಿಸುತ್ತಿದೆ. ಇದರ ನಡುವೆ ಆನ್ ಲೈನ್ ಗೇಮ್ ನಲ್ಲಿ ತೊಡಗಿ ಹಣ ಕಳೆದುಕೊಳ್ಳದಿರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸಿಬ್ಬಂದಿಗೆ ಎಚ್ಚರಿಕೆಯನ್ನು ನೀಡಬೇಕಾಗಿದೆ. ಸಿಬ್ಬಂದಿ ಹಾಗೂ ಕುಟುಂಬಸ್ಥರ ಹಿತವನ್ನು ಕಾಪಾಡಬೇಕಾಗಿದೆ ಎಂಬ ಒತ್ತಾಯ ಕೇಳಿ ಬಂದಿದೆ.