ಬುಕ್​ ಮಾಡಿದ್ದು ಫ್ಯಾನ್​, ಬಂದದ್ದು ಮಾತ್ರ ಇಟ್ಟಿಗೆ!

Online Fraud
Published on

ಸುಂಟಿಕೊಪ್ಪ(ಮೈಸೂರು): ಗ್ರಾಹಕರೇ ಆನ್​ಲೈನ್​ ಶಾಪಿಂಗ್​ ಮಾಡುವ ಮುನ್ನ ಎಚ್ಚರ! ಇಲ್ಲೊಬ್ಬ ಗ್ರಾಹಕರು ಫ್ಯಾನ್​ ಬುಕ್​ ಮಾಡಿದ್ದರು. ಆದ್ರೆ ಅವರಿಗೆ ಬಂದದ್ದು ಮಾತ್ರ ನಾಲ್ಕು ಥರ್ಮಾಕೋಲ್​ ಹಾಗೂ ಎರಡು ಮಣ್ಣಿನ ಇಟ್ಟಿಗೆ!

ಹೀಗೆ ಮೋಸ ಹೋದವರು ಸುಂಟಿಕೊಪ್ಪ ಆಸ್ಪತ್ರೆ ರಸ್ತೆಯ ಟಿ.ಆರ್​.ಜಯದೇವ. ಸೆ.25ರಂದು ದೆಹಲಿ ಮೂಲದ ಶಾಪಿಂಗ್​ ಸಂಸ್ಥೆಯ ಜಾಲತಾಣದಲ್ಲಿ ಎಕ್ಸಿಟ್​ ಫ್ಯಾನ್​ಅನ್ನು ಜಯದೇವ ಬುಕ್​ ಮಾಡಿದ್ದರು. ಅದರಂತೆ ಅ.3ರಂದು ಕೊರಿಯರ್​ ಮೂಲಕ ಪಾರ್ಸೆಲ್​ ಬಂದಿತ್ತು. 4,500 ರೂಪಾಯಿ ಪಾವತಿಸಿ ಪಾರ್ಸೆಲ್​ ಪಡೆದಿದ್ದರು. ನಂತರ ಅದನ್ನು ಬಿಚ್ಚಿ ನೋಡಿದಾಗ ಪಾರ್ಸೆಲ್​ ಒಳಗೆ 4 ಥರ್ಮಾಕೋಲ್​ ಹಾಗೂ 2 ಮಣ್ಣಿನ ಇಟ್ಟಿಗೆ ಇತ್ತು.

ಈ ಕುರಿತು ಆನ್​ಲೈನ್​ ಶಾಪಿಂಗ್​ ಸಂಸ್ಥೆಯವರಿಗೆ ದೂರವಾಣಿ ಕರೆ ಮಾಡಿ ಜಯದೇವ್​ ಮಾತನಾಡಿದಾಗ, ಪಾರ್ಸೆಲ್​ ವಿತರಿಸುವವರು ಈ ರೀತಿ ವಂಚಿಸಿರುವ ಹಲವು ಪ್ರಕರಣಗಳಿವೆ. ನಮ್ಮ ಕಂಪನಿ ಆ ರೀತಿ ಗ್ರಾಹಕರಿಗೆ ಮೋಸ ಮಾಡುವುದಿಲ್ಲ, ಎಲ್ಲವನ್ನೂ ವಿಚಾರಿಸಿ ನಿಮಗೆ ಫ್ಯಾನ್​ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಆನ್​ಲೈನ್​ ಶಾಪಿಂಗ್​ ಸಂಸ್ಥೆ ಮೋಸ ಮಾಡಿಲ್ಲ, ಯಾರೋ ಪಾರ್ಸೆಲ್​ ಬದಲಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇಂತಹ ವಂಚನೆ ಪ್ರಕರಣಗಳು ನಿತ್ಯ ಸಂಭವಿಸುತ್ತಲೇ ಇವೆ. ಗ್ರಾಹಕರು ಕೊರಿಯರ್​ ತಂದವರ ಮುಂದೆಯೇ ತಾವು ಬುಕ್​ ಮಾಡಿದ ವಸ್ತು ಇದೆಯೇ ಎಂಬುದನ್ನು ಒಮ್ಮೆ ಖಚಿತ ಮಾಡಿಕೊಳ್ಳುವುದು ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net