

ಮಂಗಳೂರು: ಕೋವಿಡ್ ಪರಿಸ್ಥಿತಿ ಮತ್ತೆ ಕೈ ಮೀರಿದಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಜಿಲ್ಲಾಡಳಿತದ ಆದೇಶದಂತೆ ಮುಂದೂಡಲಾಗಿದೆ. ಕೋವಿಡ್ ಸ್ಥಿತಿ ವಿಕೋಪಕ್ಕೆ ಹೋದಲ್ಲಿ ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಸುವ ಬಗ್ಗೆ ಸಿದ್ಧತೆ ಮಾಡಲಾಗುತ್ತಿದ್ದು, ಪುಣೆ ಮೂಲದ ಸಂಸ್ಥೆಯೊಂದು ಸಾಫ್ಟ್‌ವೇರ್ ಕೂಡ ಸಿದ್ಧಗೊಳಿಸಿದೆ ಎಂದರು.
ವಿಶ್ವವಿದ್ಯಾಲಯವು ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಯೋಜನೆಗಾಗಿ ಟೆಂಡರ್ ಆಹ್ವಾನಿಸಲಾಗಿದೆ. ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲು ಬೇಕಾದ ನಿಯಮಾವಳಿಗಳನ್ನು ರೂಪಿಸಲಿದೆ. ಸದ್ಯ ಪ್ರತಿ ಕ್ಷೇತ್ರಕ್ಕೂ ಬೇರೆ ಬೇರೆ ನಿಯಮಗಳಿದ್ದು ಗೊಂದಲಕಾರಿಯಾಗಿದೆ ಎಂದರು.
ವಿಶ್ವವಿದ್ಯಾಲಯವು ನ್ಯಾಕ್‌ನಿಂದ ಬಿ ಗ್ರೇಡ್ ಪಡೆದಿದ್ದು, ಈ ಡೇಟಾ ವೆರಿಫಿಕೇಶನ್ ವ್ಯಾಲಿಡೇಶನ್ ಪ್ರಕ್ರಿಯೆಯನ್ನು ನ್ಯಾಕ್ ಮುಂದೆ ವಿಶ್ವವಿದ್ಯಾಲಯವು ಮರುಪರಿಶೀಲನೆಗೆ ಕೋರಿದೆ ಎಂದರು.
ಹೊಸ ಶಿಕ್ಷಣ ನೀತಿಯನ್ನು ಮಂಗಳೂರು ವಿವಿಯಲ್ಲಿ ಇದೇ ಸಾಲಿನಿಂದ ಅಕ್ಟೋಬರ್ ತಿಂಗಳಿಂದಲೇ ಶುರು ಮಾಡಲಾಗುವುದು. ಈ ವರ್ಷ ಫಾರೆನ್ಸಿಕ್ ಸೈನ್ಸ್ ಸ್ನಾತಕಪೂರ್ವ ಕೋರ್ಸ್ ಪ್ರಾರಂಭಿಸುವ ಉದ್ದೇಶವಿದೆ ಎಂದರು. ಇದೇ ವೇಳೆ ಕೊಡವ ಭಾಷೆಯಲ್ಲಿ ಡಿಪ್ಲೊಮಾ ಕೋರ್ಸ್, ಜಿಎಸ್‌ಟಿ ಕುರಿತ ಡಿಪ್ಲೊಮಾ ಕೋರ್ಸ್‌ನ ಪಠ್ಯಕ್ರಮವನ್ನು ಶೈಕ್ಷಣಿಕ ಮಂಡಳಿ ಅನುಮೋದಿಸಿತು.
ಪರೀಕ್ಷೆ ರದ್ದು ನಿರ್ಧಾರ ಸರಿಯಲ್ಲ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಇಂಜಿನಿಯರಿಂಗ್ ಪರೀಕ್ಷೆಗಳನ್ನು ನಡೆಸುತ್ತಿದೆ. ಆದರೆ ಮಂಗಳೂರು ವಿವಿ ವ್ಯಾಪ್ತಿಯ ಪದವಿ ಪರೀಕ್ಷೆಗಳನ್ನು ಮಾತ್ರವೇ ಮುಂದೂಡಲು ಜಿಲ್ಲಾಡಳಿತ ಆದೇಶ ನೀಡಿರುವುದಕ್ಕೆ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಕಳವಳ ವ್ಯಕ್ತಪಡಿಸಿದರು. ಈ ನಿರ್ಧಾರ ಸರಿಯಾದುದಲ್ಲ. ವಿವಿ ಹಿಂದೆ ಲಾಕ್‌ಡೌನ್‌ನಿಂದಾಗಿ ಪರೀಕ್ಷೆ ಮುಂದೂಡಿತ್ತು. ಈಗ ಮತ್ತೆ ಪರೀಕ್ಷೆ ಮುಂದೂಡಿಕೆಯಿಂದ ಅವರ ಇಡೀ ಶೈಕ್ಷಣಿಕ ವರ್ಷವೇ ಹಾಳಾಗುತ್ತದೆ. ಜಿಲ್ಲಾಡಳಿತದ ಸೂಚನೆ ಗೌರವಿಸಿದ್ದೇವೆ ಎಂದರು.
ಕೊರತೆ ಬಜೆಟ್ ಮಂಡನೆ: ಕೋವಿಡ್‌ನಿಂದ ಪೆಟ್ಟು ತಿಂದಿರುವ ಮಂಗಳೂರು ವಿಶ್ವವಿದ್ಯಾಲಯ 2021-22ರಲ್ಲಿ ಯಾವುದೇ ಹೊಸ ಯೋಜನೆಗಳನ್ನು ಹಾಕಿಕೊಳ್ಳದೆ ಸರಳ ಬಜೆಟ್ ಮಂಡಿಸಿದೆ. ಹಣಕಾಸು ಅಧಿಕಾರಿ(ಪ್ರಭಾರ) ಬಿ.ನಾರಾಯಣ ಅವರು ಬುಧವಾರ ಶೈಕ್ಷಣಿಕ ಮಂಡಳಿ ಸಭೆಯಲ್ಲಿ 2.50 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ್ದಾರೆ.