ಜ್ಞಾನತಾಣ ಯೋಜನೆಯ ಸೌಲಭ್ಯ ಪಡೆಯಿರಿ

10bgp-1ph
Published on

ಬಾಗೇಪಲ್ಲಿ : ಹಲವು ಯೋಜನೆಗಳ ಮೂಲಕ ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಸೇವೆ ಅನನ್ಯವಾದದ್ದು ಎಂದು ತಹಸೀಲ್ದಾರ್ ಎಂ.ನಾಗರಾಜು ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರ ಏರ್ಪಡಿಸಿದ್ದ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆಯ ಜ್ಞಾನತಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶದಿಂದ ಜ್ಞಾನತಾಣ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ. 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯವನ್ನು ಟ್ಯಾಬ್‌ನೊಳಗೆ ಲಭ್ಯವಿರುವಂತೆ ಸಿದ್ದಗೊಳಿಸಿ ಇಂಟರ್‌ನೆಟ್ ಅಗತ್ಯವಿಲ್ಲದಂತೆ ಓದಲು ಅನುಕೂಲ ಮಾಡಿರುವುದು ಸ್ವಾಗತಾರ್ಹವಾಗಿದೆ. ಜ್ಞಾನತಾಣ ಯೋಜನೆಯ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಿರೀಶ್ ಮಾತನಾಡಿ, ಜನರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸಂಸ್ಥೆಯಿಂದ ಹಲವು ಯೋಜನೆಗಳನ್ನು ರೂಪಿಸಿ ಸ್ವಯಂ ಉದ್ಯೋಗ, ಹೈನುಗಾರಿಕೆ ಮತ್ತು ಕೃಷಿ ಅಭಿವೃದ್ಧಿ, ಸ್ತ್ರೀಶಕ್ತಿ ಸಂಘ, ಮಹಿಳೆಯರಿಗೆ ಸಾಲ ಯೋಜನೆ, ವಿಶೇಷ ಚೇತನ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ನೆರವು, ಮಾಸಾಶನ ನೀಡಿ ಸಹಕಾರ ನೀಡಲಾಗುತ್ತಿದೆ. ಈಗ ಆನ್‌ಲೈನ್ ತಗರಗತಿಗಳು ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಟ್ಯಾಬ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹ್ಮದ್ ಖಲೀಲ್, ಹಿರಿಯ ವಕೀಲ ಎ.ಜಿ. ಸುಧಾಕರ್, ಮುಖಂಡ ಬಿ.ಆರ್. ನರಸಿಂಹನಾಯ್ಡು ಮಾತನಾಡಿದರು. ಬಿಳ್ಳೂರು ಆಂಜನೇಯಸ್ವಾಮಿ ಸೇವಾಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜು, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ದೈಹಿಕ ಶಿಕ್ಷಣಾಧಿಕಾರಿ ಜಯರಾಂ, ಪಿ.ಜಿ.ಶಿವಶಂಕರಚಾರಿ, ಮೇಲ್ವಿಚಾರಕಿ ಸಾರಾ, ಶಾಲೆ ಮುಖ್ಯ ಶಿಕ್ಷಕ ಪಕೃದ್ದೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net