ಆನ್​ಲೈನ್ ಶಿಕ್ಷಣ ವೈಜ್ಞಾನಿಕವಾಗಿರಲಿ: ಮಾರ್ಗಸೂಚಿ ಅನುಸರಿಸಲು ಸಚಿವರ ಸೂಚನೆ | ವಿಜಯವಾಣಿ ವರದಿ ಪರಿಣಾಮ

Vijayavani Varadi Phalashruti
Published on

ಬೆಂಗಳೂರು: ಆನ್​ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನೇ ಅನುಸರಿಸಬೇಕೇ ವಿನಹಃ ಅವೈಜ್ಞಾನಿಕವಾಗಿ ತರಗತಿ ನೀಡುವುದನ್ನು ನಿಲ್ಲಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆನ್​ಲೈನ್ ಶಿಕ್ಷಣಕ್ಕಾಗಿ ಪ್ರತಿ ನಿತ್ಯ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳ ದೃಷ್ಟಿ ಹೀನತೆಗೆ ಕಾರಣವಾಗಿರುವ ಬಗ್ಗೆ ‘ಇ-ಪಾಠ ಕಣ್ಣಿಗೆ ಕಾಟ’ ಎಂಬ ಶೀರ್ಷಿಕೆಯಲ್ಲಿ ಬುಧವಾರ ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.

ವರದಿಯನ್ನು ಗಂಭಿರವಾಗಿ ಪರಿಗಣಿಸಿರುವ ಶಿಕ್ಷಣ ಸಚಿವರು, ಆನ್​ಲೈನ್ ಶಿಕ್ಷಣ ನಡೆಸುತ್ತಿರುವ ಶಾಲೆಗಳ ಅವೈಜ್ಞಾನಿಕ ಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ತಕ್ಷಣ ಸುತ್ತೋಲೆ ಹೊರಡಿಸಲು ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಸಚಿವರು, ಶಾಲೆಗಳು ತಜ್ಞರ ಸಮಿತಿ ನೀಡಿರುವ ವರದಿಯನ್ವಯ ಆನ್​ಲೈನ್ ಶಿಕ್ಷಣ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮಾರ್ಗಸೂಚಿಯಲ್ಲಿ ಏನಿದೆ? : 1 ರಿಂದ 5ನೇ ತರಗತಿ ಮಕ್ಕಳಿಗೆ ದಿನ ಬಿಟ್ಟು ದಿನ ಅಥವಾ ವಾರದಲ್ಲಿ ಗರಿಷ್ಠ 3 ದಿನ ಮಾತ್ರ ನಿತ್ಯ 30ರಿಂದ 45 ನಿಮಿಷ ಕಾಲ ಎರಡು ಅವಧಿ ಮೀರದಂತೆ, 6 ರಿಂದ 8ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ನಿತ್ಯ 30ರಿಂದ 45 ನಿಮಿಷ ಎರಡು ಅವಧಿ ಮೀರದಂತೆ, ಅದೇ ರೀತಿ 9 ಮತ್ತು 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ನಿತ್ಯ 30ರಿಂದ 45 ನಿಮಿಷಗಳ ಕಾಲ 4 ಅವಧಿ ಮೀರದಂತೆ ಆನ್​ಲೈನ್ ಶಿಕ್ಷಣ ನಡೆಸಬೇಕೆಂದು ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಆದರೆ, ಹಲವು ಶಾಲೆಗಳು ಮಾರ್ಗಸೂಚಿ ಅನುಸರಿಸದೆ ತಮಗೆ ತೋಚಿದಂತೆ ಆನ್​ಲೈನ್ ಶಿಕ್ಷಣ ನಡೆಸುತ್ತಿವೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಪ್ರಮುಖವಾಗಿ ಮಕ್ಕಳ ಕಣ್ಣುಗಳಿಗೆ ಹೆಚ್ಚಾಗಿ ತೊಂದರೆಯಾಗುತ್ತಿದೆ ಎಂದು ಪಾಲಕರು ಮತ್ತು ನೇತ್ರ ತಜ್ಞರು ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net