

ಬೆಂಗಳೂರು: ಸಾಕಷ್ಟು ಚರ್ಚೆಯಲ್ಲಿದ್ದ ಆನ್ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದು, ಈ ಕೂಡಲೇ ಎಲ್ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ (1 ರಿಂದ 5) ತರಗತಿಗಳಲ್ಲಿ ಆನ್ಲೈನ್ ಶಿಕ್ಷಣವನ್ನು ರದ್ದುಗೊಳಿಸುವಂತೆ ಆದೇಶಿಸಿದೆ.
ಬುಧವಾರ ತಜ್ಞರ ಜತೆ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್ಲೈನ್ ಶಿಕ್ಷಣವನ್ನು ರದ್ದು ಮಾಡಿರುವುದಾಗಿ ತಿಳಿಸಿದರು. ಈ ಕೂಡಲೇ ಆನ್ಲೈನ್ ಶಿಕ್ಷಣ ಹೆಸರಿನಲ್ಲಿ ನಡೆಯುತ್ತಿರುವ ತರಗತಿಗಳನ್ನು ನಿಲ್ಲಿಸಬೇಕು ಎಂದು ನಿರ್ದೇಶಿಸಿದರು.
ಆನ್ಲೈನ್ ಟೀಚಿಂಗ್ ಹೆಸರಿನಲ್ಲಿ ಶುಲ್ಕ ತೆಗೆದುಕೊಳ್ಳುವುದನ್ನು ಈ ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ಈಗಾಗಲೇ ಒಂದು ಸುತ್ತೋಲೆಯನ್ನು ಹೊರಡಿಸಿದ್ದೇವೆ. ಕೋವಿಡ್ 19 ಎಲ್ಲ ಕುಟುಂಬಗಳನ್ನು ಆರ್ಥಿಕವಾಗಿ ಕುಗ್ಗಿಸಿದೆ. ಅನೇಕರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಅನೇಕರಿಗೆ ವೇತನದಲ್ಲಿ ಕಡಿತವಾಗಿದೆ. ವಿವಿಧ ರೀತಿಯ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಮಾನವೀಯ ದೃಷ್ಟಿಯಿಂದ ಯಾರೂ ಕೂಡ ಶಾಲಾ ಶುಲ್ಕದಲ್ಲಿ ಹೆಚ್ಚಳವನ್ನು ಮಾಡಬಾರದು ಎಂದು ಮನವಿ ಮಾಡಿದರು.
ಶಿಕ್ಷಣ ಸಂಸ್ಥೆಗಳು ಸ್ವಇಚ್ಛೆಯಿಂದ ನಿರ್ಧಾರ ಮಾಡಿದರೆ ಸ್ವಾಗತ. ಈ ವರ್ಷ ಅರ್ಧ ತರಗತಿಗಳು ನಡೆಯುವುದಿಲ್ಲವಾದ್ದರಿಂದ ಅರ್ಧ ಶುಲ್ಕವನ್ನು ಪಡೆಯುವುದಾದರೆ ಉತ್ತಮ ಎಂದು ಸಚಿವರು ಯಾವುದೇ ಕಾರಣಕ್ಕೂ ಶುಲ್ಕವನ್ನು ಮಾತ್ರ ಹೆಚ್ಚಳ ಮಾಡಬಾರದೆಂದು ತಿಳಿಸಿದರು.