

ಮಧುಗಿರಿ: ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ತರಗತಿಗಳು ಸಾವಾನ್ಯ. ಆದರೆ, ಗಡಿ ಭಾಗದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುತ್ತಿದ್ದಾರೆ.
ಸೀಮಾಂಧ್ರ ಗಡಿಗೆ ಹೊಂದಿಕೊಂಡಿರುವ ಐ.ಡಿ.ಹಳ್ಳಿಯಲ್ಲಿ ತೆಲುಗು ಭಾಷಿಗರೇ ಹೆಚ್ಚಾಗಿದ್ದರೂ ಕನ್ನಡದ ಬಗ್ಗೆ ವಿಶೇಷ ಅಭಿವಾನ ಹೊಂದಿರುವುದರಿಂದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಶಿಕ್ಷಕರು ಕಲಿಕೆಗೆ ಒತ್ತು ನೀಡಿದ್ದಾರೆ.
ಹೇಗಿದೆ ಶಿಕ್ಷಣ?: ಒಂದು ತರಗತಿಯನ್ನು 3 ವಿಭಾಗಗಳಾಗಿ ವಿಂಗಡಿಸಿ, ಸ್ಮಾರ್ಟ್ ೆನ್ ಹೊಂದಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ. ಕೀಪ್ಯಾಡ್ ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ಮೂಲಕ ಮತ್ತು ದೇಗುಲ ಆವರಣ, ಸಮುದಾಯ ಭವನಗಳಲ್ಲಿ ವಠಾರ ತರಗತಿ ನಡೆಸಲಾಗುತ್ತಿದೆ. ಬೆಳಗಿನ ವೇಳೆ ವಿದ್ಯಾಗಮ ತರಗತಿಗಳನ್ನು ನಡೆಸುವ ಶಿಕ್ಷಕರು ಮಧ್ಯಾಹ್ನ ಆನ್‌ಲೈನ್ ತರಗತಿ ನಡೆಸುತ್ತಿದ್ದಾರೆ.
9ನೇ ತರಗತಿಯ 73 ಮಕ್ಕಳಲ್ಲಿ 15, 10ನೇ ತರಗತಿಯ 62 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರತರಾಗಿದ್ದು, ಶಿಕ್ಷಕರಾದ ರಂಗನಾಥಪ್ಪ, ದೊಡ್ಡರಾಮಣ್ಣ, ಎನ್. ಮಂಜುಳಾ, ಅನಿತಾ, ಎಚ್.ಒ.ಮಂಜುನಾಥ್, ಪ್ರಶಾಂತ್ ಬಿರಾದಾರ್ ಪಾಠ ಪ್ರವಚನದ ಜತೆಗೆ ಕರೊನಾ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.
ಜೂನ್‌ನಿಂದಲೇ ಕಾರ್ಯರೂಪ: ಶಿಕ್ಷಕರ ತಂಡವು ಉಪಪ್ರಾಂಶುಪಾಲ ಬಿ.ಎನ್.ನಾಗರಾಜು ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಜತೆ ಚರ್ಚಿಸಿ ಆನ್‌ಲೈನ್ ತರಗತಿ ನಡೆಸಲು ನಿರ್ಧರಿಸಿದ್ದರಿಂದ ಜೂನ್ ಆರಂಭದಲ್ಲೆ ಇ-ಕ್ಲಾಸ್ ಕಾರ್ಯರೂಪಕ್ಕೆ ತರಲಾಯಿತು. ಶಾಲೆಯಲ್ಲಿ ಉಪ ಪ್ರಾಂಶುಪಾಲರು ಸೇರಿ 7 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಒಟ್ಟು 150 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಶಾಲೆಯ ಹಳೇ ವಿರ್ದ್ಯಾರ್ಥಿನಿಯಾದ ಇಂಜಿನಿಯರ್ ಮಮತಾ, ಪಾವಗಡ ಬಿಇಒ ಕಚೇರಿ ಇಸಿಒ ಬಿ.ಕೆ.ಶಿವಕುವಾರ್ ಸಹ ಸಾಥ್ ನೀಡಿದ್ದು, ಶಿಕ್ಷಕರ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತವಾಗಿದೆ.
ಐ.ಡಿ.ಹಳ್ಳಿ ಶಾಲೆ ಮುಖ್ಯಶಿಕ್ಷಕ ಭೇಟಿಯಾಗಿ ಹಳೇ ವಿದ್ಯಾರ್ಥಿ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದಾಗ ಆಶ್ಚರ್ಯವಾಯಿತು. ನಾನೂ ಲಿಂಕ್ ಬಳಸಿ ತರಗತಿಯಲ್ಲಿ ಭಾಗಿಯಾಗಿದ್ದು, ಇದೊಂದು ವಿಶೇಷ ಅನುಭವ. ಸರ್ಕಾರಿ ಶಾಲೆಯಲ್ಲೂ ಆನ್‌ಲೈನ್ ತರಗತಿ ನಡೆಸುತ್ತಿರುವುದು ಮೆಚ್ಚುಗೆಯ ವಿಷಯ. ರೇವಣಸಿದ್ದಪ್ಪ ಡಿಡಿಪಿಐ ಮಧುಗಿರಿ ಶೈಕ್ಷಣಿಕ ಜಿಲ್ಲೆ