

ಗೋಪಾಲಕೃಷ್ಣ ಪಾದೂರು, ಉಡುಪಿ
ಜಿಲ್ಲೆಯಲ್ಲಿ ಆನ್‌ಲೈನ್ ಮೂಲಕ ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಮಾಡುವವರ ಸಂಖ್ಯೆ ಶೇ.50ರಷ್ಟು ಹೆಚ್ಚಿದೆ.
2019 ಡಿಸೆಂಬರ್‌ನಲ್ಲಿ 36,533 ಗ್ರಾಹಕರು (ಮೊತ್ತ 10.72 ಕೋಟಿ ರೂ.) ಬಿಲ್ ಪಾವತಿಸಿದ್ದರು. 2020 ಡಿಸೆಂಬರ್ ವೇಳೆಗೆ ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡಿದವರ ಸಂಖ್ಯೆ 65 ಸಾವಿರ (19.52 ಕೋಟಿ ರೂ.) ಕೋವಿಡ್-19 ಕಾರಣಕ್ಕೆ, ಸರದಿ ಸಾಲಿನಲ್ಲಿ ನಿಂತು ವಿದ್ಯುತ್ ಬಿಲ್ ಪಾವತಿ ಮಾಡುವ ಪರಿಪಾಠದಿಂದ ಬಳಕೆದಾರರು ದೂರ ಉಳಿಯುತ್ತಿದ್ದು, ಪರ್ಯಾಯ ವ್ಯವಸ್ಥೆ ಗೆ ಒಲವು ಹೆಚ್ಚಿದ್ದು ಸ್ಪಷ್ಟ.
ಪೇಟಿಎಂ ಪಾವತಿ ಏರುಗತಿ
2019ರ ಡಿಸೆಂಬರ್‌ನಲ್ಲಿ ಪೇಟಿಎಂ ಮೂಲಕ 4,754 ಮಂದಿ ಬಿಲ್ ಪಾವತಿಸಿದ್ದರೆ, 2020ರ ಡಿಸೆಂಬರ್ ಅಂತ್ಯಕ್ಕೆ ಈ ಸಂಖ್ಯೆ 34,108ಕ್ಕೆ ಏರಿದೆ. ಇದೇ ರೀತಿ 2019ರಲ್ಲಿ ನೆಫ್ಟ್ ಮೂಲಕ 5076, ಕರ್ನಾಟಕ ಒನ್ ಮೂಲಕ 557 ಮಂದಿ, ಕಚೇರಿಗೆ ಬಂದು ಎಟಿಪಿ (ಎನೀ ಟೈಂ ಪೇಮೆಂಟ್) ಯಂತ್ರ ಮೂಲಕ 1,60,425 ಗ್ರಾಹಕರು ಹಣ ಪಾವತಿಸಿದ್ದಾರೆ. 2020ರ ಡಿಸೆಂಬರ್ ಅಂತ್ಯದಲ್ಲಿ ಆರ್‌ಟಿಜಿಎಸ್ ಮೂಲಕ 3,225, ಕರ್ನಾಟಕ ಒನ್ ಮೂಲಕ 595, ಭಾರತ್ ಬಿಲ್ ಪೇ ಮೂಲಕ 6,384, ಗ್ರಾಮೀಣ ಎನ್‌ಎಸಿಎಚ್ (ಪೋಸ್ಟ್) 12,639 ಬಳಕೆದಾರರು ಬಿಲ್ ನೀಡಿದ್ದಾರೆ. ಕಚೇರಿಗೆ ಬಂದು ಪಾವತಿ ಮಾಡುವವರ ಸಂಖ್ಯೆ ಇಳಿದಿದೆ. ಎಟಿಪಿ ಮೂಲಕ 1,42,958 ಮಂದಿ ಬಿಲ್ ಪಾವತಿ ಮಾಡಿದ್ದಾರೆ.
ತಿಂಗಳಿಗೆ 55 ಕೋಟಿ ರೂ.ವಿದ್ಯುತ್ ಬಳಕೆ
ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂಗೆ ಪ್ರತೀ ತಿಂಗಳು ಸರಾಸರಿ 55 ಕೋಟಿ ರೂ.ವಿದ್ಯುತ್ ಬಿಲ್ ಪಾವತಿಯಾಗುತ್ತದೆ. ವಾರ್ಷಿಕ 660 ಕೋಟಿ ರೂ. ಆದಾಯ ಬರುತ್ತಿದೆ. ಗ್ರಾಹಕರು ಪ್ರತೀ ತಿಂಗಳು 66 ಮಿಲಿಯನ್ ಯುನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಮಣಿಪಾಲದಲ್ಲಿ 13 ಮಿಲಿಯನ್ ಯುನಿಟ್, ಉಡುಪಿಯಲ್ಲಿ 13, ಬ್ರಹ್ಮಾವರದಲ್ಲಿ 5.7, ಕಾಪುವಿನಲ್ಲಿ 5.4, ಕೋಟದಲ್ಲಿ 2.9, ಕುಂದಾಪುರದಲ್ಲಿ 6.3, ಬೈಂದೂರು 2.6 ಮಿಲಿಯನ್ ಯುನಿಟ್ ವಿದ್ಯುತ್ ಖರ್ಚಾಗುತ್ತದೆ.
ವಿದ್ಯುತ್ ಆನ್‌ಲೈನ್‌ನಲ್ಲಿ ಪಾವತಿದಾರರ ಸಂಖ್ಯೆ ಶೇ.50 ಹೆಚ್ಚಾಗಿದೆ. ಅನೇಕ ಕಡೆ ರೂಫ್‌ಟಾಪ್ ಸೋಲಾರ್ ಘಟಕ ನಿರ್ಮಾಣವಾಗುತ್ತಿದೆ. ಜನರು ವಿದ್ಯುತ್ ಸ್ವಾವಲಂಬನೆ ಮೇಲೆ ಗಮನಹರಿಸಿದ್ದಾರೆ. ವಿದ್ಯುತ್ ಬಿಲ್ ಪಾವತಿಯಲ್ಲಿ ಜಿಲ್ಲೆ ಶೇ.100 ಪ್ರಗತಿ ಸಾಧಿಸಿದೆ.
ನರಸಿಂಹ ಪಂಡಿತ್, ಮೆಸ್ಕಾಂ ಅಧೀಕ್ಷಕ, ಉಡುಪಿ