ಗ್ರಾಪಂಗಳಲ್ಲಿ ಆನ್‌ಲೈನ್ ಲೆಕ್ಕ ಪರಿಶೋಧನೆ, ಆಯ್ದ ಪಂಚಾಯಿತಿಗಳಲ್ಲಿ ಪ್ರಯೋಗ

Computer
Published on

ಹರೀಶ್ ಮೋಟುಕಾನ ಮಂಗಳೂರು

ಪಾರದರ್ಶಕತೆ, ಏಕರೂಪತೆ ಮತ್ತು ನಿಗದಿತ ಅವಧಿಯಲ್ಲಿ ಲೆಕ್ಕ ಪರಿಶೋಧನೆ ನಡೆಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳ ಲೆಕ್ಕ ಪರಿಶೋಧನೆ ಇನ್ನು ಮುಂದೆ ಆನ್‌ಲೈನ್ ಮೂಲಕ ಜಿಲ್ಲಾ ಪಂಚಾಯಿತಿಯಿಂದಲೇ ನಡೆಯಲಿದೆ.

ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನ, ಆರ್ಥಿಕ ಸಂಪನ್ಮೂಲ ಸಂಗ್ರಹ ಹಾಗೂ ಹಂಚಿಕೆ ಮೇಲೆ ನಿಗಾ ವಹಿಸಲು ಆನ್‌ಲೈನ್ ಲೆಕ್ಕ ಪರಿಶೋಧನೆ ಮಾಡುವಂತೆ ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಆಯ್ದ ಕೆಲವು ಪಂಚಾಯಿಗಳಲ್ಲಿ ಕಾರ್ಯರೂಪಕ್ಕೆ ತಂದು, ಫಲಿತಾಂಶ ನೋಡಿಕೊಂಡು ಎಲ್ಲ ಗ್ರಾಪಂಗಳಿಗೆ ವಿಸ್ತರಣೆ ಮಾಡಲು ದ.ಕ.ಜಿಪಂ ನಿರ್ಧರಿಸಿದೆ.

ಈವರೆಗೆ ಸ್ಥಳೀಯ ಲೆಕ್ಕ ಪರಿಶೋಧನಾ ಅಧಿಕಾರಿಗಳ ತಂಡ ಸಂಬಂಧಪಟ್ಟ ಪಂಚಾಯಿತಿಗಳಿಗೆ ಭೇಟಿ ನೀಡಿ ಲೆಕ್ಕ ಪರಿಶೋಧನೆ ನಡೆಸುತ್ತಿತ್ತು. ವರ್ಷಕ್ಕೊಮ್ಮೆ ನಡೆಯಬೇಕಾದ ಲೆಕ್ಕ ಪರಿಶೋಧನೆ ಸಿಬ್ಬಂದಿ ಕೊರತೆ ಹಾಗೂ ಇತರ ತಾಂತ್ರಿಕ ತೊಂದರೆಯಿಂದ ಎರಡು-ಮೂರು ವರ್ಷಕ್ಕೊಮ್ಮೆ ನಡೆಯುತ್ತಿದೆ. ಇದರಿಂದ ಗ್ರಾಪಂ ಲೆಕ್ಕಾಚಾರಗಳು ಗೊಂದಲಗಳಿಗೆ ಕಾರಣವಾಗುತ್ತಿದೆ. ಆನ್‌ಲೈನ್ ಲೆಕ್ಕ ಪರಿಶೋಧನೆ ವ್ಯವಸ್ಥೆ ಗೊಂದಲಗಳಿಗೆ ಪರಿಹಾರ ಕಲ್ಪಿಸಲಿದೆ. ಸಕಾಲದಲ್ಲಿ ಲೆಕ್ಕ ಪರಿಶೋಧನೆ ನಡೆಯುವುದರಿಂದ ಕೆಲ ಅಕ್ರಮಗಳಿಗೂ ಕಡಿವಾಣ ಬೀಳಲಿದೆ.

ಹಳೆಯ ಪರಿಪಾಠ ಇನ್ನಿಲ್ಲ: ತಾಂತ್ರಿಕ ಯುಗದಲ್ಲಿ ಪ್ರತಿಯೊಂದು ಡಿಜಿಟಲೀಕರಣ ಆಗುತ್ತಿದೆ. ಗ್ರಾಪಂಗಳಿಗೆ ಕೇಂದ್ರ ಕಚೇರಿಯಿಂದ ಸಿಬ್ಬಂದಿ ಕಳುಹಿಸಿ ಲೆಕ್ಕ ಪರಿಶೋಧನೆ ಮಾಡುವ ಪರಿಪಾಠವಿತ್ತು. ಅದರ ಬದಲು ಕೇಂದ್ರ ಕಚೇರಿಯಿಂದಲೇ ಆನ್‌ಲೈನ್ ಮೂಲಕ ಲೆಕ್ಕ ಪರಿಶೋಧನೆ ಮಾಡಲು ಸಾಧ್ಯವಿದೆ. ಈ ವಿಚಾರದಲ್ಲಿ ವ್ಯಕ್ತವಾಗುತ್ತಿರುವ ಆರೋಪಗಳು ಆನ್‌ಲೈನ್‌ನಲ್ಲಿ ಸರಿಯಾಗಲಿದೆ. ನಿಗದಿತ ಅವಧಿಯೊಳಗೆ ಲೆಕ್ಕ ಪರಿಶೋಧನೆ ಮಾಡಲು ಸಾಧ್ಯವಾಗಲಿದೆ. ಹಣಕಾಸಿನ ವ್ಯವಹಾರದ ಮೇಲೆ ನಿಗಾ ಇಡಲು ಈ ವ್ಯವಸ್ಥೆ ಪೂರಕವಾಗಿದೆ.

ಕೇಂದ್ರದ ಸೂಚನೆ ಜಾರಿ: ಲೆಕ್ಕ ಪರಿಶೋಧನೆಯಲ್ಲಿ ಏಕರೂಪತೆ ತರಲು ಹಾಗೂ ನಿಗದಿತ ಅವಧಿಯಲ್ಲಿ ಲೆಕ್ಕಪತ್ರ ಪರಿಶೋಧನೆ ನಡೆಸುವ ಉದ್ದೇಶದಿಂದ 15ನೇ ಹಣಕಾಸು ಆಯೋಗದ ಶಿಫಾರಸಿನ ಆಧಾರದಲ್ಲಿ ನವದೆಹಲಿಯ ಪಂಚಾಯತ್‌ರಾಜ್ ಮಂತ್ರಾಲಯ ಆನ್‌ಲೈನ್ ಲೆಕ್ಕ ಪರಿಶೋಧನೆ ಮಾಡಲು ಸೂಚಿಸಿದೆ. ಇದಕ್ಕಾಗಿ ಪ್ರತ್ಯೇಕ ವೆಬ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಆನ್‌ಲೈನ್ ಲೆಕ್ಕ ಪರಿಶೋಧನೆ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಪರಿಣಾಮ, ಈ ವ್ಯವಸ್ಥೆ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ.

ಆನ್‌ಲೈನ್ ಮೂಲಕ ಜಿಪಂನಿಂದಲೇ ಗ್ರಾಪಂಗಳ ಲೆಕ್ಕ ಪರಿಶೋಧನೆ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಆಯ್ದ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದರಿಂದ ಪಾರದರ್ಶಕತೆ, ಏಕರೂಪತೆ ತರಲು ಮತ್ತು ನಿಗದಿತ ಅವಧಿಯಲ್ಲಿ ಲೆಕ್ಕ ಪರಿಶೋಧನೆ ಸಾಧ್ಯ. ಹಂತ ಹಂತವಾಗಿ ಎಲ್ಲ ಗ್ರಾಪಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. - ಡಾ.ಸೆಲ್ವಮಣಿ ಆರ್ ಸಿಇಒ, ದ.ಕ.ಜಿ.ಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net