ಈರುಳ್ಳಿ ಬೆಳೆದು ಕೈಸುಟ್ಟುಕೊಂಡ ರೈತರು

21 ALVANDI 07
ಅಳವಂಡಿ ಸಮೀಪದ ಗುಡಗೇರಿ ಗ್ರಾಮದ ಜಮೀನೊಂದರಲ್ಲಿ ಬೆಳೆದ ಈರುಳ್ಳಿ ಬೆಳೆ.
Published on

ಅಳವಂಡಿ: ಪ್ರಸಕ್ತ ವರ್ಷ ಈರುಳ್ಳಿ ಬೆಳೆದ ರೈತರು ಅತಿವೃಷ್ಟಿ ಹಾಗೂ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು ಜಮೀನಿನಲ್ಲಿ ಬೆಳೆಯನ್ನು ಟ್ರಾೃಕ್ಟರ್ ಮೂಲಕ ನಾಶಪಡಿಸುತ್ತಿದ್ದಾರೆ.

ಕಳೆದ ವರ್ಷ ಈರುಳ್ಳಿಯನ್ನು ಸಾಕಷ್ಟು ರೈತರು ಬಿತ್ತನೆ ಮಾಡಿದ್ದರು. ಇಳುವರಿ ಕೂಡ ಚೆನ್ನಾಗಿ ಬಂದಿತ್ತು ಹಾಗೂ ಬೆಲೆಯೂ ಕೂಡ ಕೈಹಿಡಿದಿದ್ದರಿಂದ ಲಾಭದತ್ತ ಮುಖ ಮಾಡಿದ್ದ ರೈತರು ಪ್ರಸಕ್ತ ವರ್ಷ ಬೆಲೆ ಕುಸಿತದಿಂದ ಬೆಳೆಯನ್ನು ಜಮೀನಿನಲ್ಲಿಯೇ ಬಿಡುತ್ತಿದ್ದಾರೆ.

ಸಮೀಪದ ಗುಡಗೇರಿ ಗ್ರಾಮದ ರೈತ ವೆಂಕಣ್ಣ ಆಡೂರು ತಮ್ಮ 5 ಎಕರೆ ಜಮೀನಿನಲ್ಲಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಖುಷಿಗೊಂಡು ಸಾವಿರಾರು ರೂ. ಖರ್ಚು ಮಾಡಿ ಈರುಳ್ಳಿ ಬಿತ್ತಿದ್ದರು. ಈಗ ಬೆಲೆ ಕುಸಿತದಿಂದ ಬೇಸರಗೊಂಡು ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಇವರಂತೆ ಅನೇಕ ರೈತರು ಟ್ರಾೃಕ್ಟರ್ ಮೂಲ ಬೆಳೆ ನಾಶ ಮಾಡುತ್ತಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ಪ್ರಸಕ್ತ ವರ್ಷ 780 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಅಳವಂಡಿ ವಲಯವೊಂದರಲ್ಲೇ 110 ಹೆಕ್ಟೇರ್ ಬಿತ್ತನೆಯಾಗಿದೆ.\

ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆಯೂ ಚನ್ನಾಗಿದ್ದವು. ನಂತರ ಸತತ ಮಳೆ ಸುರಿದಿದ್ದರಿಂದ ಬೆಳೆ ಹಾಳಾಗಿದೆ. ಉಳಿದ ಫಸಲು ಕಟಾವು ಮಾಡಿ ಮಾರಾಟ ಮಾಡಬೇಕೆಂದರೆ ಬೆಲೆ ಕುಸಿತದ ಬರೆ ರೈತರ ಮನೋಬಲ ಕುಸಿಯುವಂತೆ ಮಾಡಿದೆ. ಬಿತ್ತನೆಗೆ ಜಮೀನು ಹದಗೊಳಿಸುವ ಖರ್ಚು, ಬಿತ್ತನೆ ಖರ್ಚು, ಬೀಜ, ಗೊಬ್ಬರ, ರಾಸಾಯನಿಕಗಳ ಬಳಕೆ ಮುಂತಾದವುಗಳ ಖರ್ಚು ಸೇರಿ ಎಕರೆಗೆ 20 ಸಾವಿರ ರೂ.ವರೆಗೆ ವೆಚ್ಚವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 50 ಕೇಜಿ ಚೀಲಕ್ಕೆ 200 ರಿಂದ 400 ರೂ. ಇದೆ. ಈರುಳ್ಳಿ ಕಿತ್ತು ಕಟಾವು ಮಾಡಿ ಚೀಲಕ್ಕೆ ತುಂಬಿ ಮಾರುಕಟ್ಟೆಗೆ ಕಳಿಸಲು ಸಾಕಷ್ಟು ಖರ್ಚು ಬರಲಿದೆ. ಈಗೀನ ಮಾರುಕಟ್ಟೆ ದರದಲ್ಲಿ ಈರುಳ್ಳಿ ಕಟಾವು ಮಾಡಿ ಕಳಿಸಿದರೆ ಆಳಿನ ಖರ್ಚು ಕೂಡ ಬರುವುದಿಲ್ಲ. ಹೀಗಾಗಿ ಬೆಳೆಯನ್ನು ಜಮೀನಿನಲ್ಲಿ ನಾಶ ಮಾಡಲಾಗುತ್ತಿದೆ. ಸರ್ಕಾರ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿ ಪರಿಹಾರ ನೀಡಬೇಕು. ತುರ್ತಾಗಿ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಒಂದು ಎಕರೆ ಈರುಳ್ಳಿ ಬೆಳೆಯಲು ಸಾವಿರಾರು ರೂ. ಖರ್ಚು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಇರುವುದರಿಂದ ಬೆಳೆಯನ್ನು ಕುರಿ ಬಿಟ್ಟು ಮೇಯಿಸುತ್ತಿದ್ದೇವೆ ಹಾಗೂ ಟ್ರಾೃಕ್ಟರ್ ಮೂಲಕ ಹರಗುತ್ತಿದ್ದೇವೆ. ಸರ್ಕಾರ ನೆರವಿಗೆ ಬರಬೇಕು.

ವೆಂಕಣ್ಣ ಆಡೂರು

ರೈತ ಗುಡಗೇರಿ

ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದ್ದರಿಂದ ರೈತರಿಗೆ ಹಾನಿಯಾಗಿದೆ. ಪರಿಹಹಾರ ಕ್ರಮದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.

ಆರಿಫ್ ಅಗಸಿಮನಿ

ಸಹಾಯಕ ತೋಟಗಾರಿಕೆ ಅಧಿಕಾರಿ, ಅಳವಂಡಿ ಹೋಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net