

ಗುಳೇದಗುಡ್ಡ: ತಾಲೂಕಿನಲ್ಲಿ ವಿವಿಧೆಡೆ ರಾಶಿ ಹಂತಕ್ಕೆ ಬಂದಿದ್ದ ಸಜ್ಜೆ, ಈರುಳ್ಳಿ ಬೆಳೆಗಳು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹೊಲದಲ್ಲೇ ಕೊಳೆಯುತ್ತಿವೆ. ಅಲ್ಲದೆ, ಮೊಳಕೆ ಹೊಡೆಯುತ್ತಿದ್ದು, ಕಟಾವು ಮಾಡಿ, ಹೊಲದಲ್ಲಿ ಕೂಡಿ ಹಾಕಿರುವ ಸಜ್ಜೆ ಹಾಳಾಗುವ ಸಂಭವ ಎದುರಾಗಿದೆ. ಇದರಿಂದ ಗುಳೇದಗುಡ್ಡ ತಾಲೂಕಿನ ರೈತರು ಕಂಗಾಲಾಗುವಂತಾಗಿದೆ.
ತಾಲೂಕಿನಲ್ಲಿ 241 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬೆಳೆ ಮಳೆಯಿಂದಾಗಿ ಹಾಳಾಗಿದೆ ಎಂದು ಪ್ರಾಥಮಿಕ ಸರ್ವೇಯಿಂದ ಗೊತ್ತಾಗಿದೆ. ಕಷ್ಟಪಟ್ಟು ಬೆಳೆಸಿದ್ದ ಬೆಳೆ ಇನ್ನೇನು ಕೈಗೆಟುಕಿತು ಎನ್ನುವಷ್ಟರಲ್ಲೇ ಎಲ್ಲವೂ ನಾಶವಾಯಿತು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಎರಡು ಎಕರೆಯಲ್ಲಿ ಸಜ್ಜೆ ಬೆಳೆದೆದ್ದಿವೆ. ಇನ್ನೇನು ಕಾಟಾವು ಮಾಡಬೇಕಿತ್ತು. ಭಾರಿ ಮಳೆ ಸುರಿದಿದ್ದರಿಂದ ಎಲ್ಲವೂ ಹಾಳಾಗಿದೆ. ರಾಶಿಗೆ ಬಂದಿದ್ದ ಸಜ್ಜೆಯನ್ನು ಗೂಡು ಕಟ್ಟಲಾಗಿತ್ತು. ಕೆಲವೊಂದಿಷ್ಟು ಹೊಲದಲ್ಲಿಯೇ ಬಿಡಲಾಗಿತ್ತು. ಈಗ ಎಲ್ಲವು ಮೊಳಕೆ ಹೊಡೆಯುತ್ತಿದೆ. ಇದರಿಂದ ನಮಗೆ ದಿಕ್ಕೆ ತೋಚದಂತಾಗಿದೆ ಎನ್ನುತ್ತಾರೆ ರೈತ ಮಹಿಳೆ ಕೋಟೆಕಲ್ಲ ಗ್ರಾಮ ಬಸವ್ವ ಟೀಕಪ್ಪ ಮೇದಾರ.
ಅಂದಾಜು 2020 ಹೆಕ್ಟೇರ್ ಪ್ರದೇಶ ಹಾನಿ
ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ ತಾಲೂಕಿನ ಮಳೆ ಮತ್ತು ಪ್ರವಾಹದಿಂದ ಅಂದಾಜು 2020 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಆಗಸ್ಟ್‌ನಿಂದ ಸೆಪ್ಟೆಂಬರ್‌ನಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ರೈತರು ಬೆಳೆದ 488 ಹೆಕ್ಟೇರ್ ಈರುಳ್ಳಿ, 241 ಹೆಕ್ಟೇರ್ ಸಜ್ಜೆ, 168 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಸೂರ್ಯಕಾಂತಿ, 59 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೈಬ್ರೀಡ್ ಜೋಳ, 10 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, 29 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಇನ್ನಿತರ ಬೆಳೆಗಳು ಸೇರಿ 1170 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಸೆಪ್ಟೆಂಬರ್ ಕೊನೆಯ ವಾರದಿಂದ ಅಕ್ಟೋಬರ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ 850 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಸಜ್ಜೆ, ಸೂರ್ಯಕಾಂತಿ, ಹೈಬ್ರೀಡ್ ಜೋಳ, ಹತ್ತಿ, ಇನ್ನಿತರ ಬೆಳೆಗಳು ಹಾನಿಯಾಗಿವೆ.
ಬೆಳೆಗಳ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ತೋಟಗಾರಿಕೆ, ಕಂದಾಯ, ಕೃಷಿ ರೇಷ್ಮೆ ಇಲಾಖೆಗಳಿಂದ ತಂಡ ರಚಿಸಿ ಸರ್ವೇ ಮಾಡುತ್ತಿದ್ದು, ಈ ವಾರ ತಾಲೂಕಿನಲ್ಲಿ ಒಟ್ಟು ಹಾನಿಯಾದ ನಿಖರವಾದ ವರದಿ ಸಿಗಲಿದೆ.
- ಆನಂದ ಗೌಡರ , ಕೃಷಿ ಅಧಿಕಾರಿಗಳು, ಗುಳೇದಗುಡ್ಡ
EndFragment