ಏರುತ್ತಲೇ ಇದೆ ಉಳ್ಳಾಗಡ್ಡಿ ದರ

h22- Onian 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಸತತ ಮಳೆಯ ಪರಿಣಾಮ ಧಾರವಾಡ ಜಿಲ್ಲೆಯಷ್ಟೇ ಅಲ್ಲ, ಹುಬ್ಬಳ್ಳಿಗೆ ಉಳ್ಳಾಗಡ್ಡಿ ತರುತ್ತಿದ್ದ ಪ್ರದೇಶದಲ್ಲೂ ಬೆಳೆ ನಾಶವಾಗಿ ಕಳೆದ ಎರಡು ವಾರದಿಂದ ಬೆಲೆ ಏರುಮುಖವಾಗಿಯೇ ಚಲಿಸುತ್ತಿದೆ.

ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಕುಂದಗೋಳ, ಧಾರವಾಡ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತಿತ್ತು. ಈ ವರ್ಷದ ಮುಂಗಾರಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿತ್ತು. ಆದರೆ, ಶೇ. 90ರಷ್ಟು ಬೆಳೆ ನಾಶವಾಗಿ ಎಪಿಎಂಸಿ ಮಾರುಕಟ್ಟೆಗೆ ಉಳ್ಳಾಗಡ್ಡಿ ಆವಕವೇ ಇಲ್ಲದಂತಾಗಿದೆ.

ಬಂದರೂ ಅದು ಹೆಚ್ಚು ಕಾಲ ತಡೆಯುವ ಶಕ್ತಿ ಇಲ್ಲದ ಬೇಗ ಕೊಳೆತು ಹೋಗುವಂತಹ ಉಳ್ಳಾಗಡ್ಡಿ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ದುಡ್ಡು ಕೊಟ್ಟರೂ ಉತ್ತಮ ಉಳ್ಳಾಗಡ್ಡಿ ಗ್ರಾಹಕರಿಗೆ ಸಿಗದಾಗಿದೆ.

ಪ್ರತಿ ವರ್ಷ ಈ ಸೀಸನ್​ನಲ್ಲಿ ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದಲೇ 10ರಿಂದ 20 ಸಾವಿರ ಕ್ವಿಂಟಾಲ್​ವರೆಗೆ ಉಳ್ಳಾಗಡ್ಡಿ ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಸದ್ಯದ ಆವಕ ತೀರಾ ಕಡಿಮೆಯಾಗಿದೆ. ಗುರುವಾರ ಸ್ಥಳೀಯ ಉಳ್ಳಾಗಡ್ಡಿ ಆವಕ 371 ಕ್ವಿಂಟಾಲ್ ಮಾತ್ರ ಇತ್ತು. ಇನ್ನು ಪಕ್ಕದ ಬಾಗಲಕೋಟೆ, ವಿಜಯಪುರ ಇತರೆಡೆಯಿಂದಲೂ ಆವಕ ಇಳಿಮುಖವಾಗಿದೆ. ಮಹಾರಾಷ್ಟ್ರದಲ್ಲೂ ಅತಿಯಾದ ಮಳೆಯಾಗಿದ್ದರಿಂದ ಅಲ್ಲಿಂದಲೂ ಬರುತ್ತಿಲ್ಲ. ಗುರುವಾರ ಪುಣೆ ಉಳ್ಳಾಗಡ್ಡಿ ಬರೀ 947 ಕ್ವಿಂಟಾಲ್ ಬಂದಿತ್ತು. ಇನ್ನು ದರ ನೋಡುವುದಾದರೆ ಪ್ರತಿ ಕ್ವಿಂಟಾಲ್​ಗೆ ಸ್ಥಳೀಯ ಉಳ್ಳಾಗಡ್ಡಿ ಕನಿಷ್ಠ 500ರೂ.ನಿಂದ 4600 ರೂ.ವರೆಗೆ ಹೋಗಿದೆ. ಅದೇ ರೀತಿ ಪುಣೆ ಉಳ್ಳಾ ಗಡ್ಡಿ ಕ್ವಿಂಟಾಲ್​ಗೆ 8000 ರೂ. ವರೆಗೆ ಹೋಗಿದೆ. ಇದೇ ಉಳ್ಳಾಗಡ್ಡಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 100 ರೂ. ದಾಟಿದೆ.

ಒಂದೆಡೆ ಬೆಳೆ ಹಾಳಾಗಿ ರೈತರು ಕಣ್ಣೀರು ಸುರಿಸುತ್ತಿದ್ದರೆ, ಇನ್ನೊಂದೆಡೆ ಬೆಲೆ ಹೆಚ್ಚಳದಿಂದ ಗ್ರಾಹಕರ ಜೇಬಿಗೂ ಉಳ್ಳಾಗಡ್ಡಿ ಭಾರವಾಗಿದೆ.

ಆಮದು ಇಲ್ಲ: ಕೇಂದ್ರ ಸರ್ಕಾರ ಆಮದು ನಿಯಮಾವಳಿಗಳನ್ನು ಸಡಿಲಿಸಿದೆ. ಆದರೂ, ವಿದೇಶದಿಂದ ಉಳ್ಳಾಗಡ್ಡಿ ತರಿಸುವ ಬಗ್ಗೆ ವ್ಯಾಪಾರಸ್ಥರು ಮನಸ್ಸು ಮಾಡುತ್ತಿಲ್ಲ. ಕಳೆದ ವರ್ಷ ಈಜಿಪ್ತ ಉಳ್ಳಾಗಡ್ಡಿ ಹುಬ್ಬಳ್ಳಿ ಪೇಟೆಗೆ ಬಂದಿತ್ತು. ಆದರೆ, ಈ ವರ್ಷ ಈಜಿಪ್ತ ಉಳ್ಳಾಗಡ್ಡಿಯನ್ನು ಇದುವರೆಗೂ ಯಾರೂ ತರಿಸಿಲ್ಲ. ಈಜಿಪ್ತ ಉಳ್ಳಾಗಡ್ಡಿ ಬಣ್ಣ ಹಾಗೂ ಆಕಾರದಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ನೋಡಲು ತೀರಾ ಕೆಂಪಗೆ ಕಾಣುತ್ತದೆ. ಈ ಭಾಗದ ಜನರು ಅದನ್ನು ಕೊಳ್ಳಲು ಮನಸ್ಸು ಮಾಡುವುದಿಲ್ಲ. ಹಾಗಾಗಿ ನಾವು ಸದ್ಯಕ್ಕೆ ತರಿಸುತ್ತಿಲ್ಲ ಎಂದು ಹುಬ್ಬಳ್ಳಿ ಎಪಿಎಂಸಿ ಉಳ್ಳಾಗಡ್ಡಿ ವರ್ತಕ ಸಲೀಂ ಬ್ಯಾಹಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net