ಈರುಳ್ಳಿ ದರ ಏಕಾಏಕಿ ಕುಸಿತ, ಬೆಳೆಗಾರರ ಧರಣಿ

apmc
ಬೆಳಗಾವಿ ಎಪಿಎಂಸಿ ಗೇಟ್ ಬೀಗ ಹಾಕಿ ಈರುಳ್ಳಿ ಬೆಳೆಗಾರರು ಪ್ರತಿಭಟನೆ ನಡೆಸಿದರು.
Published on

ಬೆಳಗಾವಿ: ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಏಕಾಏಕಿ ದರ ಕುಸಿತ, ದಲ್ಲಾಳಿಗಳ ಹಾವಳಿ ಖಂಡಿಸಿ ಸೋಮವಾರ ವಿವಿಧ ಜಿಲ್ಲೆಗಳ ಬೆಳೆಗಾರರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಸೋಮವಾರ ನಡೆದ ಈರುಳ್ಳಿ ಹರಾಜು ಆರಂಭದಲ್ಲಿಯೇ ಉತ್ತಮ ಈರುಳ್ಳಿಗೆ ದಿಢೀರನೆ 900 ರಿಂದ 1,200 ರೂ. ಕಡಿಮೆ ಮಾಡಿ ಕ್ವಿಂಟಾಲ್ 2,200 ರಿಂದ 2,800 ರೂ. ದರ ನಮೂದಿಸಿದ್ದರು. ಕಡಿಮೆ ದರ್ಜೆಯ ಈರುಳ್ಳಿಗೆ ಕ್ವಿಂಟಾಲ್‌ಗೆ 450 ರಿಂದ 800 ರೂ. ದರ ನಿಗದಿ ಮಾಡುತ್ತಿರುವುದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ರೈತರು ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಈಗಾಗಲೇ ಹುಬ್ಬಳ್ಳಿ, ಬೆಂಗಳೂರು ಸೇರಿ ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆ ಈರುಳ್ಳಿ ಕ್ವಿಂಟಾಲ್‌ಗೆ ಕನಿಷ್ಠ 3,800 ರಿಂದ 4,900 ರೂ. ದರದಲ್ಲಿ ಮಾರಾಟವಾಗಿದೆ. ಆದರೆ, ಬೆಳಗಾವಿ ಎಪಿಎಂಸಿಯಲ್ಲಿ ಮಾತ್ರ ಏಕಾಏಕಿ ಕ್ವಿಂಟಾಲ್‌ಗೆ 1,200 ರೂ.ದರ ಕಡಿಮೆ ಮಾಡಿ ದರ ನಮೋದಿಸಿದ್ದಾರೆ. ಅಲ್ಲದೆ, ಹರಾಜು ಪ್ರಕ್ರಿಯೆಯಲ್ಲಿ ಈರುಳ್ಳಿ ನಿಗದಿ ಪಡಿಸುವವರೇ, ಖರೀದಿಸುವವರೇ ಇರುವುದರಿಂದ ರೈತರಿಗೆ ಮೋಸ ಮಾಡುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ದರ ನಿಗದಿ, ತೂಕದಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ವಹಿಸುತ್ತಿಲ್ಲ ಎಂದು ಬೆಳೆಗಾರರು ದೂರಿದರು. ಸಗಟು ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಈರುಳ್ಳಿ ಕ್ವಿಂಟಾಲ್ 2,200 ರಿಂದ 2,800 ರೂ.ಗೆ ಖರೀದಿಸುತ್ತಿರುವ ದಲ್ಲಾಳಿಗಳು ಚಿಲ್ಲರೆ ಮಾರುಕಟ್ಟೆಯಲ್ಲಿ 5,200 ರಿಂದ 6,700 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಅಂಗಡಿಗಳಲ್ಲಿ ಸ್ಥಳೀಯ ಏಜೆಂಟ್‌ರು ತಮ್ಮ ಲಾಭಕ್ಕಾಗಿ ರೈತರಿಂದ ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ. ದರ ಪರಿಶೀಲನೆ ನಡೆಸಿದ ಬಳಿಕ ಈರುಳ್ಳಿ ಖರೀದಿ ಹರಾಜು ಪ್ರಕ್ರಿಯೇ ನಡೆಸಿ ಇಲ್ಲದಿದ್ದರೆ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ರೈತರು ಮಾರುಕಟ್ಟೆ ಗೇಟ್‌ಗೆ ಬೀಗ ಹಾಕಿ ಪಟ್ಟುಹಿಡಿದು ಕುಳಿತುಕೊಂಡರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ರೈತರು ಮತ್ತು ಖರೀದಿದಾರರ ಸಭೆ ನಡೆಸಿದರು. ಈರುಳ್ಳಿಯ ಗುಣಮಟ್ಟದ ಆಧಾರದ ಮೇಲೆ ಕ್ವಿಂಟಾಲ್ ಹೆಚ್ಚಿನ ದರಕ್ಕೆ ಖರೀದಿಸುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಕೈಬಿಟ್ಟಿರು.

ಈ ಮೊದಲು ಮಾರುಕಟ್ಟೆಯಲ್ಲಿ ಅತ್ಯಂತ ಸಣ್ಣ ಗಾತ್ರದ ಗಡ್ಡೆಗಳಿಗೆ ಕನಿಷ್ಠ 1800 ರಿಂದ 2,500 ರೂ. ಮತ್ತು ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್‌ಗೆ 4,800 ದರದಲ್ಲಿ ಮಾರಾಟವಾಗಿದೆ. ಸಾಮಾನ್ಯವಾಗಿ ಈರುಳ್ಳಿ ಖರೀದಿಸುವ ದಲ್ಲಾಳರು ಅದನ್ನು ಇಲ್ಲಿಂದ ಮಹಾರಾಷ್ಟ್ರ, ಗೋವಾ, ಹೈದ್ರಾಬಾದ್, ಚನ್ನೈ ಮಾರುಕಟ್ಟೆಗೆ ಕಳುಹಿಸುತ್ತಾರೆ. ಆದರೆ, ಈಗಾಗಲೇ ಖರೀದಿಯಾಗಿರುವ ಈರುಳ್ಳಿ ಮಾರಾಟವಾಗಿಲ್ಲ. ಹೀಗಾಗಿ, ವರ್ತಕರು ಹರಾಜಿನಲ್ಲಿ ಕಡಿಮೆ ದರ ನಮೂದಿಸಿದ್ದಾರೆ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕಾಶ ನಾಯಕ, ವಿ.ಪಿ.ಪರಡ್ಡಿ, ಶಿವಾನಂದ ಜೋಗಿ, ಬಸಪ್ಪ ಪೂಜೇರಿ, ವರುಣ ದೇಸಾಯಿ, ಹಣಮಂತ.ಎಚ್, ವಿಠ್ಠಲ ನೇಗಿನಹಾಳ ಇತರರಿದ್ದರು.

ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಉತ್ತಮ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು. ಹರಾಜು ಪ್ರಕ್ರಿಯೆಯಲ್ಲಿ ತಪ್ಪು ಮಾಡಿರುವ, ಮಾರಾಟ ಬಿಲ್ ಪರಿಶೀಲನೆ ನಡೆಸಿ ದಲ್ಲಾಳಿಗಳ ಪರವಾನಗಿ ರದ್ದುಪಡಿಸ ಲಾಗುವುದು. | ಎಂ.ಡಿ. ಚೆಬನೂರು, ಉಪನಿರ್ದೇಶಕ, ಎಪಿಎಂಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net