ಜಮೀನಿನಲ್ಲಿದ್ದ ಉಳ್ಳಾಗಡ್ಡಿ, ಮೆಣಸಿನಕಾಯಿ ಕಳವು

ONION
Published on

ಮುಂಡರಗಿ: ತಾಲೂಕಿನ ಮೇವುಂಡಿ ಗ್ರಾಮದ ಹೊರ ವಲಯದಲ್ಲಿರುವ ರೈತ ಶೇಖಪ್ಪ ಆಲೂರು ಎಂಬುವವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ದುಷ್ಕರ್ಮಿಗಳು ಕಿತ್ತು ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.

ರೈತ ಶೇಖಪ್ಪ ಅವರು ತಮ್ಮ 3 ಎಕರೆ ಪೈಕಿ 1 ಎಕರೆ ಜಮೀನಿನಲ್ಲಿ ಸುಮಾರು 30 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆದಿದ್ದರು. ಕಟಾವು ಹಂತಕ್ಕೆ ಬಂದಿದ್ದ ಉಳ್ಳಾಗಡ್ಡಿ ಬೆಳೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇವಲ 8 ಕ್ವಿಂಟಾಲ್‌ನಷ್ಟು ಕಿತ್ತಿದ್ದರು. ಇನ್ನೂ ಅಂದಾಜು 25 ಕ್ವಿಂಟಾಲ್‌ನಷ್ಟು ಉಳ್ಳಾಗಡ್ಡಿ ಹಾಗೂ 1.5 ಕ್ವಿಂಟಾಲ್‌ನಷ್ಟು ಮೆಣಸಿನಕಾಯಿ ಬರುವ ನಿರೀಕ್ಷೆ ಇತ್ತು. ಶೇಖಪ್ಪ ಅವರ ಮನೆಯಲ್ಲಿ ಮದುವೆ ಕಾರ್ಯವಿದ್ದ ಕಾರಣ ಕೆಲ ದಿನಗಳವರೆಗೆ ಜಮೀನಿನ ಕಡೆಗೆ ಹೋಗಿರಲಿಲ್ಲ. ಮಂಗಳವಾರ ಜಮೀನಿನ ಕಡೆಗೆ ಹೋದಾಗ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆ ಇಲ್ಲದ್ದು ಕಂಡು ಆತಂಕಗೊಂಡಿದ್ದಾರೆ.

ಸದ್ಯ ಕ್ವಿಂಟಾಲ್ ಉಳ್ಳಾಗಡ್ಡಿ 4 ಸಾವಿರದಿಂದ 6 ಸಾವಿರ ರೂ.ವರೆಗೆ ಇದ್ದು, ಕ್ವಿಂಟಾಲ್ ಮೆಣಸಿನಕಾಯಿಗೆ 20 ಸಾವಿರ ರೂ.ವರೆಗೂ ಇದೆ. ಹೀಗಾಗಿ ದುಷ್ಕರ್ಮಿಗಳು ಕಟಾವಿಗೆ ಬಂದಿದ್ದ ಬೆಳೆಯನ್ನು ಕಿತ್ತು ಕಳವು ಮಾಡಿಕೊಂಡು ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net