ಈರುಳ್ಳಿ ರಫ್ತು ನಿಷೇಧ ವಾಪಸ್,ಬೆಳೆಗಾರರ ಸಂಘ ಹರ್ಷ

IMG_20240220_120421_544.jpg
Published on

ಹುಬ್ಬಳ್ಳಿ: ಈರುಳ್ಳಿ ರಫ್ತಿನ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ, ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಬೆಳೆಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಮೂಡಿದೆ ಎಂದು ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಎನ್. ಸಿದ್ದೇಶ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫ್ತು ನಿಷೇಧ ಮಾಡಿದ್ದರಿಂದ ಮುಂಗಾರಿನಲ್ಲಿ ಬೆಲೆ ಕುಸಿತವಾಗಿ ರೈತರು ದೊಡ್ಡ ನಷ್ಟ ಅನುಭವಿಸಿದರು. ಬೆಳೆಗಾರರ ಹೋರಾಟಕ್ಕೆ ಮಣಿದು ನಿಷೇಧ ತೆರವುಗೊಳಿಸಿದ್ದು ಸ್ವಾಗತಾರ್ಹ ಎಂದರು.

ಮಾನಧನ್ ಯೋಜನೆಯಡಿ ರೈತ ಸಮುದಾಯಕ್ಕೆ ನೀಡುವ ಪಿಂಚಣಿ ಯೋಜನೆಗೆ ವಯೋಮಿತಿ ಅತ್ಯಂತ ಚಿಕ್ಕದಾಗಿದೆ. ಇದನ್ನು ಸಡಿಲಗೊಳಿಸಬೇಕು ಎಂದರು.

ಕಳಪೆ ಬೀಜದಿಂದ ಉಂಟಾಗುವ ಹಾನಿ ತಪ್ಪಿಸಲು ಸಾವಯವ ಬೀಜದ ಪ್ಯಾಕೇಜ್ ಕಿಟ್ ಕೊಡಬೇಕು. ಆಹಾರ ಧಾನ್ಯದಂತೆ ರೈತರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಉತ್ತಮ ಬೀಜ, ಗೊಬ್ಬರ, ಕೀಟನಾಶಕ ವಿತರಿಸಬೇಕು. ಬೆಳೆವಿಮೆ ಪರಿಹಾರಕ್ಕೆ ವೈಜ್ಞಾನಿಕ ಪದ್ಧತಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಈರುಳ್ಳಿಗೆ ಬೆಂಬಲ ಬೆಲೆ ಕೊಡಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸ್ವಾಗತಾರ್ಹ ಕ್ರಮ. ಇದು ಈರುಳ್ಳಿ ಬೆಳೆಗಾರರಿಗೆ ಸಂತಸ ತಂದಿದೆ ಎಂದರು.

ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ, ಗದಗನ ವೀರಣ್ಣ ಕಾಳಗಿ, ಪ್ರಧಾನ ಕಾರ್ಯದಶಿರ್ ಬಸವರಾಜ ಹಡಪದ, ಹನುಮಂತ ದುರ್ಗಣ್ಣವರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net