

ಹುಬ್ಬಳ್ಳಿ: ಉಳ್ಳಾಗಡ್ಡಿ ಬೆಳೆಯಲು ರೈತರಿಗೆ ಪ್ರೋತ್ಸಾಹಕ ಯೋಜನೆ ರೂಪಿಸಬೇಕು, ಕನಿಷ್ಠ ಬೆಂಬಲ ಬೆಲೆ ಘೋಷಿಸಿ ದರ ಸ್ಥಿರವಾಗಿ ಇರುವಂತೆ ನೋಡಿಕೊಳ್ಳಬೇಕು, ಹೊರದೇಶಕ್ಕೆ ರಫ್ತು ಮಾಡಲು ಅವಕಾಶ ನೀಡಬೇಕು ಎಂದು ಈ ಭಾಗದ ರೈತರು, ವರ್ತಕರು ಆಗ್ರಹಿಸಿದರು.
ಇಲ್ಲಿಯ ಅಮರಗೋಳ ಎಪಿಎಂಸಿ ಆಡಳಿತ ಕಚೇರಿಯಲ್ಲಿ ಭಾನುವಾರ ಭಾರತ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಮನೋಜ ಕೆ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡ ಆಯೋಜಿಸಿದ್ದ ವ್ಯಾಪಾರಸ್ಥರು ಹಾಗೂ ರೈತರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿವೆ.
ಉಳ್ಳಾಗಡ್ಡಿ ಬೆಳೆಗಾರರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು. ಉತ್ಪಾದನೆ ಕುಂಠಿತವಾಗಲು ಕಾರಣಗಳನ್ನು ವಿವರಿಸಿದರು.
ಶಿರಗುಪ್ಪಿ ರೈತ ಪ್ರಕಾಶ ಹನುಮರೆಡ್ಡಿ, ಉಳ್ಳಾಗಡ್ಡಿ ಬೆಳೆಗೆ ಹೆಚ್ಚು ಖರ್ಚು ಮಾಡಬೇಕು. ಅತಿವೃಷ್ಟಿ- ಅನಾವೃಷ್ಟಿ ಎದುರಾದರೆ ಖರ್ಚು ಮಾಡಿದಷ್ಟು ಹಣವೂ ವಾಪಸ್ ಬರುವುದಿಲ್ಲ. ಇದಕ್ಕಾಗಿ ಅನೇಕ ರೈತರು ಪರ್ಯಾಯ ಬೆಳೆಯತ್ತ ಗಮನ ಹರಿಸಿದ್ದಾರೆ. ಈ ಭಾಗದಲ್ಲಿ ಮುಂಗಾರಿನಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಸಲು ಬಂದಾಗ ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಆಗಲೇ ದರ ಏರಿಳಿತ ಹೆಚ್ಚಾಗಿರುತ್ತದೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಉಳ್ಳಾಗಡ್ಡಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಉಳ್ಳಾಗಡ್ಡಿ ರಫ್ತಿಗೆ ನಿರ್ಬಂಧ ಹೇರಿದೆ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಎದುರಾಗಿದೆ. ಅನೇಕ ವ್ಯಾಪಾರಸ್ಥರು ಉಳ್ಳಾಗಡ್ಡಿ ವ್ಯಾಪಾರದಿಂದ ದೂರ ಸರಿಯುತ್ತಿದ್ದಾರೆ. ಇದು ಬೆಳೆಗಾರರ ಮೇಲು ದುಷ್ಪರಿಣಾಮ ಬೀರುತ್ತಿದೆ. ರಫ್ತು ನಿಷೇಧ ಆದೇಶ ವಾಪಸ್ ಪಡೆಯಬೇಕು ಎಂದರು.
ಭಾರತದ ಉಳ್ಳಾಗಡ್ಡಿಗೆ ಅಕ್ಕಪಕ್ಕದ ಅನೇಕ ದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ರಫ್ತು ಶುಲ್ಕ ಕಡಿಮೆ ಮಾಡಿ ನಿರ್ಬಂಧ ತೆರವು ಮಾಡಬೇಕು. ಇಲ್ಲವಾದರೆ ರೈತರು ಉಳ್ಳಾಗಡ್ಡಿ ಬೆಳೆಯುವುದನ್ನೇ ನಿಲ್ಲಿಸಬಹುದು ಎಂದು ಹೇಳಿದರು.
ವೀಕ್ಷಣೆ: ಮಹಾರಾಷ್ಟ್ರದಿಂದ ಉಳ್ಳಾಗಡ್ಡಿ ಪೂರೈಕೆ, ಸಂಗ್ರಹ ಹಾಗೂ ಕರ್ನಾಟಕದಲ್ಲಿ ಬೆಳೆಯುವ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ವೀಕ್ಷಣೆ ಮಾಡಲಾಗಿದೆ. ಗದಗ, ವಿಜಯಪುರ, ಬಾಗಲಕೋಟೆ, ನವಲಗುಂದ ಭಾಗಗಳಲ್ಲಿ ಬೆಳೆಯುವ ಪ್ರದೇಶಗಳಲ್ಲಿ ಅವಲೋಕನ ನಡೆಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಬೆಳೆ ವಿಸ್ತರಣೆ ಸಾಧ್ಯತೆ ಕುರಿತು ವರದಿ ಸಲ್ಲಿಸಲಾಗುವುದು ಎಂದು ಅಧ್ಯಯನ ತಂಡ ತಿಳಿಸಿತು.
ಬೆಳೆ ಸಂರಕ್ಷಣೆಗೆ ಕ್ರಮ: ಎಪಿಎಂಸಿ ಕಾರ್ಯದರ್ಶಿ ಮೇರುನಂದನ ಮಾತನಾಡಿ, ಉಳ್ಳಾಗಡ್ಡಿ ಹಾಗೂ ಇತರ ಬೆಳೆಗಳು ಬೇಗ ಕೊಳೆಯುವುದನ್ನು ತಪ್ಪಿಸಲು ಹುಬ್ಬಳ್ಳಿಯಲ್ಲಿ ರೇಡಿಯೇಶನ್ ಕೇಂದ್ರ ನಿಮಿರ್ಸಲು ಉದ್ದೇಶಿಸಲಾಗಿದೆ. ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ಉಳ್ಳಾಗಡ್ಡಿ ವ್ಯಾಪಾರ ನಡೆಯುತ್ತದೆ. ಹೆಚ್ಚಿನ ರೈತರನ್ನು ಉಳ್ಳಾಗಡ್ಡಿ ಬೆಳೆಯತ್ತ ಸೆಳೆಯಲು ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೇಂದ್ರ ಅಧ್ಯಯನ ತಂಡದ ಉನ್ನತಾಧಿಕಾರಿ ಮನೋಜ್ ಕೆ., ಪಂಕಜಕುಮಾರ್, ಮುಖೇಶಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ, ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ ಇತರರು ಪಾಲ್ಗೊಂಡಿದ್ದರು.