

ಮೂಡಿಗೆರೆ: ಉದುಸೆ ಗ್ರಾಮದ ಓಣಿ ಮಾರಮ್ಮ ದೇವಸ್ಥಾನದಲ್ಲಿ ಸುಗ್ಗಿ ಹಬ್ಬ ವಿಜೃಂಭಣೆಯಿಂದ ನಡೆಯಿತು. ವಿವಿಧ ರೀತಿಯ ಪೂಜಾ ಕೈಂಕರ್ಯ ಹಾಗೂ ಪುರಾತನ ಸಂಸ್ಕೃತಿ ಹಬ್ಬದ ವೈಭವವನ್ನು ಹೆಚ್ಚಿಸಿತ್ತು.
ಪ್ರತಿ ವರ್ಷ ಏಪ್ರಿಲ್ನಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿ ಹಬ್ಬ ಆಚರಿಸಲಾಗುತ್ತಿದೆ. ಉದುಸೆ, ಹೆಗ್ಗರವಳ್ಳಿ, ಚಕ್ಕುಡಿಗೆ ಗ್ರಾಮಸ್ಥರು ನಿರ್ವಹಣಾ ಮಠಕ್ಕೆ ಹೋಗಿ ಆರಂಭಿಕ ವ್ಯವಸ್ಥೆ ಮಾಡುತ್ತಾರೆ. ಅಲ್ಲಿನ ಪದ್ಧತಿಯಂತೆ ಸುಗ್ಗಿ ಹಬ್ಬ ಆರಂಭಿಸಲಾಗುತ್ತದೆ. 12 ದಿನದ ಸುಗ್ಗಿ ಹಬ್ಬದಲ್ಲಿ ಮೂರೂ ಗ್ರಾಮಗಳ ಜನರು ಸೇರಿ ಓಣಿ ಮಾರಮ್ಮನವರಿಗೆ ಪೂಜೆ ಸಲ್ಲಿಸಿದರು. ನಂತರ ಸಾರನ್ನು ಕರೆತರುವ ಪ್ರಕ್ರಿಯೆ ನಡೆಯುತ್ತದೆ. 3 ಗ್ರಾಮದ ಜನ 12 ದಿನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಮಂಚ, ಹಾಸಿಗೆಯಲ್ಲಿ ಮಲಗಿಕೊಳ್ಳುವಂತಿಲ್ಲ. ನೆಲದಲ್ಲಿ ಬಟ್ಟೆ ಹಾಕಿಕೊಂಡು ಅದರಲ್ಲಿ ಮಲಗುವ ಕಟ್ಟುನಿಟ್ಟಿನ ಸಂಪ್ರದಾಯವನ್ನು ಮೂರು ಗ್ರಾಮಗಳ ಗ್ರಾಮಸ್ಥರು ಚಾಚು ತಪ್ಪದೆ ಪಾಲಿಸುತ್ತಾರೆ.
ಸುಗ್ಗಿಹಬ್ಬವನ್ನು ಮೂವರು ಗ್ರಾಮಗಳ ಗ್ರಾಮಸ್ಥರು ಸೌಹಾರ್ದತೆಯಿಂದ ಆಚರಿಸುತ್ತಾರೆ. ಹೊರಗಿನಿಂದ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಾರು ಹಾಕಿದ ದಿನ ಬಂಬರ ಗುಡಿಯ ಬನದಲ್ಲಿ ಮಡೆ ಪೂಜೆ ನಡೆಯಿತು. ಗುಡಿ ತೋಪಿನ ಹೊಲದಲ್ಲಿ ದೇವರ ಗಂಧ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾಸಿವೆ ಬನದಲ್ಲಿ ಶುಕ್ರವಾರ ಮಡೆ ಪೂಜೆ, ಮಾರಿಕಟ್ಟೆಯಲ್ಲಿ ದೀಪದ ಮಲ್ಲಿ ಉತ್ಸವ ನಡೆಯಿತು. ಶನಿವಾರ ಕಲಿಕಾ ಮಂದಿರದಲ್ಲಿ ದೊಡ್ಡಮ್ಮನವರ ಉತ್ಸವ ನಡೆಯಲಿದೆ. ಭಾನುವಾರ ದೊಡ್ಡಮ್ಮನವರ ಹಗಲು ಸುಗ್ಗಿ ಕೋಲಾಟ, ಹಣ್ಣುಕಾಯಿ ಪೂಜೆ ನೆರವೇರಿಸಿ ದೇವರ ಉಯ್ಯಲೆ ನಿರ್ಮಿಸಿದ ನಂತರ ದೊಡ್ಡಮ್ಮನವರ ಸುಗ್ಗಿ ಮುಕ್ತಾಯವಾಗಲಿದೆ.