ದರೋಡೆಗೆ ಬಂದವನು ಚಿನ್ನವನ್ನೇ ಮುಟ್ಟಲಿಲ್ಲ!

Cyber Crime 24 Sept 2020
Published on

ವಿಟ್ಲ: ಇಲ್ಲಿನ ಮೇಗಿನಪೇಟೆಯಲ್ಲಿ ಒಂಟಿ ಮಹಿಳೆ ವಾಸವಿದ್ದ ಮನೆಗೆ ಶುಕ್ರವಾರ ಬೆಳಗ್ಗೆ ನುಗ್ಗಿದ ಆಗಂತುಕನೋರ್ವ ದರೋಡೆಗೆ ನಡೆಸಿದ್ದ ಯತ್ನ ವಿಫಲವಾಗಿದೆ. ಶುಕ್ರವಾರ ಬೆಳಗ್ಗೆ ದೇವರ ಮನೆಯಲ್ಲಿ ದೀಪ ಇಡುತ್ತಿದ್ದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ವ್ಯಕ್ತಿ ಲಲಿತಾ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಅಡುಗೆ ಮನೆಗೆ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿ, ಮನೆ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಬೆಳಗ್ಗೆ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ ಈ ಘಟನೆ ಅಕ್ಕಪಕ್ಕದ ಮನೆಯವರ ಗಮನಕ್ಕೆ ಬಂದಿಲ್ಲ. ಕೆಲ ಹೊತ್ತಿನ ಬಳಿಕ ಹಿಂಬಾಗಿಲ ಮೂಲಕ ಕೈಗೆ ವೈರ್ ಸುತ್ತಿಸಿಕೊಂಡು, ಮುಖದಿಂದ ರಕ್ತ ಬರುತ್ತಿದ್ದ ಸ್ಥಿತಿಯಲ್ಲಿ ಬೊಬ್ಬೆ ಹೊಡೆಯುತ್ತಾ ಮಹಿಳೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮುಖಕ್ಕೆ ಮತ್ತು ಎದೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಾನುವಾರ ರಾತ್ರಿ ಇದೇ ಮನೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮಾತನಾಡಿದ್ದ. ಕುಡಿಯಲು ನೀರು ಕೇಳಿದ್ದ. ಬಳಿಕ ಅದೇ ರಾತ್ರಿ ಮನೆಯ ಬಾಗಿಲು ಬಡಿದ ಶಬ್ದವಾಗಿತ್ತು. ಇದರಿಂದ ಭಯಗೊಂಡಿದ್ದ ಮಹಿಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಹುಡುಕಿದರೂ, ಯಾರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಆಗಂತುಕ ಈ ಮನೆಗೆ ದಾಳಿ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನಾದರೂ ಮನೆಯ ಕಪಾಟಿನಲ್ಲಿದ್ದ ಬಂಗಾರವನ್ನು ಮುಟ್ಟಿಲ್ಲ. ಆತ ದರೋಡೆಗೆ ಬಂದಿದ್ದೇ ಆಗಿದ್ದರೆ, ಬೆಲೆ ಬಾಳುವ ವಸ್ತುಗಳನ್ನು ಹಾಗೇ ಬಿಟ್ಟು ಹೋಗುತ್ತಿರಲಿಲ್ಲ. ಕಪಾಟನ್ನು ಒಡೆಯುವ ಕೆಲಸಕ್ಕೂ ಆತ ಕೈಹಾಕಿಲ್ಲ. ಮಹಿಳೆಯ ಕಿವಿಯಲ್ಲಿದ್ದ ಒಂದು ಓಲೆ ನಾಪತ್ತೆಯಾಗಿತ್ತು. ಆದರೆ ನಂತರ ಮನೆಯನ್ನು ಶೋಧಿಸುವ ವೇಳೆ ಅದೂ ಪತ್ತೆಯಾಗಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net