

ಮೂಡಿಗೆರೆ: ಪಟ್ಟಣದಲ್ಲಿ ರಸ್ತೆಗಳನ್ನು ಈವರೆಗೂ ಮೇಲ್ದರ್ಜೆಗೇರಿಸದಿರುವುದು ಹಾಗೂ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಎಂ.ಜಿ.ರಸ್ತೆಯನ್ನು ಅಗಲೀಕರಣಗೊಳಿಸಿ ಅರಣ್ಯ ಕಚೇರಿ, ವಸತಿಗೃಹ, ಬಿಇಒ ಕಚೇರಿ, ಹಳೆ ತಾಲೂಕು ಕಚೇರಿಯನ್ನು ತೆರವುಗೊಳಿಸಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಒತ್ತಾಯಿಸಿದರು.
ಪಪಂ ಸಭಾಂಗಣದಲ್ಲಿ ನಡೆದ ಟ್ರಾಫಿಕ್ ಸಮಸ್ಯೆ ಕುರಿತು ಸಾರ್ವಜನಿಕ ಸಭೆಯಲ್ಲಿ ಪಪಂ ಸದಸ್ಯ ಪಿ.ಜಿ.ಅನುಕುಮಾರ್ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಕಿರಿದಾಗಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ಕಚೇರಿಯನ್ನು ಬಿದರಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಳಿಸಿ ಹಳೆ ವಸತಿಗೃಹ ಕಟ್ಟಡಗಳನ್ನು ಹಾಗೂ ತಾಲೂಕು ಕಚೇರಿ, ಬಿಇಒ ಕಚೇರಿ, ಗೆಂಡೆಹಳ್ಳಿ ರಸ್ತೆಯಲ್ಲಿರುವ ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸಿದರೆ ಪಟ್ಟಣದ ಮಧ್ಯ ಭಾಗದಲ್ಲಿ 10 ಎಕರೆಯಷ್ಟು ಜಾಗ ಸಿಗುತ್ತದೆ. ಅಲ್ಲಿ ವಾಹನ ಪಾರ್ಕಿಂಗ್ ಮಾಡಬಹುದು ಎಂದು ತಿಳಿಸಿದರು.
ಎಸ್‌ಡಿಪಿಐ ಸದಸ್ಯ ಪಿ.ಕೆ.ಹನೀಫ್ ಮಾತನಾಡಿ, ಕಳೆದ 2 ವರ್ಷದ ಹಿಂದೆ ಎಂ.ಜಿ.ರಸ್ತೆ ಅಗಲೀಕರಣಕ್ಕಾಗಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಈವರೆಗೂ ಅಗಲೀಕರಣ ಪ್ರಕ್ರಿಯೆ ನಡೆದಿಲ್ಲ ಎಂದು ಗಮನ ಸೆಳೆದಾಗ, ಪಪಂ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಎಂ.ಜಿ.ರಸ್ತೆ ಅಗಲಿಕರಣಕ್ಕೆ 50 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿತ್ತು. ಸ್ಥಳಿಯ ಇಬ್ಬರು ವ್ಯಕ್ತಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ತಾತ್ಕಾಲಿಕವಾಗಿ ಅಗಲೀಕರಣ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ರಸ್ತೆ ಅಗಲೀಕರಣಕ್ಕೆ ನ್ಯಾಯಾಲಯದ ತಡೆ ಇಲ್ಲ. ಸದ್ಯದಲ್ಲೆ ಅಗಲೀಕರಣಕ್ಕೆ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.