

ಬ್ಯಾಡಗಿ: ಗ್ರಾಮದ ಆರಾಧ್ಯ ದೇವರಾದ ಸಿದ್ಧರಾಮೇಶ್ವರ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಗ್ರಾಮದಲ್ಲಿ ಭಿನ್ನ ಗುಂಪುಗಳ ಪದಾಧಿಕಾರಿಗಳ ನಡುವೆ ಗದ್ದಲ ಉಂಟಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ತಾಲೂಕಿನ ಚಿಕ್ಕಬಾಸೂರು ಗ್ರಾಮದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ದೇವಸ್ಥಾನದ ಟ್ರಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವರ್ಷದಿಂದ ಆರಂಭವಾದ ಆಂತರಿಕ ಜಗಳ ಈಗ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದೆ. ಮೂರು ಗುಂಪುಗಳ ನಡುವಿನ ಮಾತಿನ ಚಕಮಕಿ ಗದ್ದಲಕ್ಕೆ ತಿರುಗಿ ಈಗ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದೆ. ಸಿದ್ಧರಾಮೇಶ್ವರ ದೇಗುಲವನ್ನು ಹೊಸದಾಗಿ ನಿರ್ವಿುಸಲು ನಿರ್ಧರಿಸಿದ್ದು, ಈ ಸಂಬಂಧ ದೇಗುಲದ ಹಂಚು ತೆಗೆಯಲು ಒಂದು ಗುಂಪು ಮುಂದಾಗಿತ್ತು. ಈ ವೇಳೆ ಇನ್ನೊಂದು ಗುಂಪು ಆಗಮಿಸಿ, ಪ್ರಕರಣ ನ್ಯಾಯಾಲಯದಲ್ಲಿದ್ದು, ಹಂಚು ತೆಗೆಯಬೇಡಿ ಎಂದು ಕಾಮಗಾರಿ ಸ್ಥಗಿತಗೊಳಿಸಿದರು. ಈ ವೇಳೆ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು.
ಘಟನೆಯ ಹಿನ್ನೆಲೆ: ಇಲ್ಲಿನ ಶಿವಯೋಗಿ ಸಿದ್ಧರಾಮೇಶ್ವರ ದೇವಸ್ಥಾನ ಕಟ್ಟಿಗೆಯ ಕಂಬ ಹಾಗೂ ಕೆಂಪು ಹಂಚಿನ ಮಣ್ಣಿನ ಗೋಡೆಯಿಂದ ಕೂಡಿದೆ. 1994 ರಲ್ಲಿ ವಿವಿಧ ಸಮುದಾಯಗಳ ಮುಖಂಡರು ಸೇರಿ ಬೆಳಗಾವಿಯಲ್ಲಿ ಶ್ರೀ ಸಿದ್ಧರಾಮೇಶ್ವರ ಟ್ರಸ್ಟ್ ಕಮಿಟಿ ಎಂದು ನೋಂದಾಯಿಸಿದ್ದರು.
ಗ್ರಾಮದ ಭಿನ್ನ ಸಮುದಾಯಕ್ಕೆ ಸೇರಿದ ಕೆಲವರು ಸಮಿತಿಯಲ್ಲಿ ನಮ್ಮನ್ನು ಸೇರ್ಪಡೆ ಮಾಡಿಕೊಂಡು ಹೊಸ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದನೆ ಸಿಕ್ಕಿಲ್ಲವೆಂದು ಆ ಗುಂಪಿನ 22 ಜನರು ಶ್ರೀ ಸಿದ್ಧರಾಮೇಶ್ವರ ಟ್ರಸ್ಟ್ ಕಮಿಟಿ ಎಂದು ಪ್ರತ್ಯೇಕವಾಗಿ ನೋಂದಾಯಿಸಿದ್ದಾರೆ. ಪರ್ಯಾಯವಾಗಿ ಇನ್ನೊಂದು ಗುಂಪಿನ 32 ಜನರು ಶ್ರೀ ಗುರು ಸಿದ್ಧರಾಮೇಶ್ವರ ಟ್ರಸ್ಟ್ ಎಂದು ನೋಂದಾಯಿಸಿದ್ದು, ಈಗ ಒಂದೇ ದೇವಸ್ಥಾನಕ್ಕೆ ಮೂರು ಹೆಸರಿನ ಟ್ರಸ್ಟ್ಗಳು ರಚನೆಯಾಗಿವೆ. ಮೂರು ಗುಂಪುಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ವಾತಾವರಣ ಕದಡಿದೆ. ಊರಿನ ಹಿರಿಯರು ದೇವಸ್ಥಾನ ಹೊಸದಾಗಿ ನಿರ್ವಿುಸಲು ಸುಮಾರು 5 ಕೋ.ರೂ. ವೆಚ್ಚದದಲ್ಲಿ ಸಿದ್ಧತೆ ನಡೆಸಿದ್ದು, ಕಾಮಗಾರಿ ಆರಂಭವಾಗುವ ಮುನ್ನವೇ ಪದಾಧಿಕಾರಿಗಳ ಗದ್ದಲ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.
ಗ್ರಾಮದಲ್ಲಿ ಉತ್ತಮ ವಾತಾವರಣ ನಿರ್ವಿುಸುವ ಉದ್ದೇಶದಿಂದ ಶಾಸಕ ಬಸವರಾಜ ಶಿವಣ್ಣನವರ, ತಹಸೀಲ್ದಾರ್ ಫೀರೋಜ್ಷಾ ಸೋಮನಕಟ್ಟಿ, ಸಿಪಿಐ ಮಾಲತೇಶ ಲಂಬಿ ಸೇರಿದಂತೆ ಗ್ರಾಮದ ಮೂರು ಗುಂಪಿನ ಕೆಲ ಮುಖಂಡರ ನೇತೃತ್ವದಲ್ಲಿ ಫೆ. 12ರಂದು ಸಭೆ ನಡೆಸಲಾಗಿದೆ. ಮೊದಲಿದ್ದ ಶ್ರೀ ಸಿದ್ಧರಾಮೇಶ್ವರ ಸೇವಾ ಸಮಿತಿಯಲ್ಲಿ ಹೊಸದಾಗಿ ಆರಂಭವಾದ ಎರಡೂ ಟ್ರಸ್ಟ್ಗಳ ಪದಾಧಿಕಾರಿಗಳನ್ನು ಸೇರಿಕೊಂಡು ಗ್ರಾಮದಲ್ಲಿ ದೇವಸ್ಥಾನ ನಿರ್ವಿುಸಲು ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ. ಸಭೆ ಮುಗಿದ ಒಂದೆರಡು ದಿನಗಳಲ್ಲಿ ಇಂತಹ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.
ಗ್ರಾಮದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಿದ್ಧರಾಮೇಶ್ವರ ಸೇವಾ ಸಮಿತಿ ನೋಂದಾವಣೆಯಾಗಿದ್ದು, ಗ್ರಾಮದ ವಿವಿಧ ಸಮುದಾಯಗಳ 17 ಜನ ಪದಾಧಿಕಾರಿಗಳಿದ್ದಾರೆ. ದೇವಸ್ಥಾನ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದಲ್ಲ, ಹೊಸದಾಗಿ ರಚಿಸಿದ ಎರಡು ಟ್ರಸ್ಟ್ನ ಕೆಲ ಸದಸ್ಯರನ್ನು ಸೇರಿಸಿಕೊಂಡು ದೇವಸ್ಥಾನ ನಿರ್ವಿುಸಲು ನಿರ್ಧರಿಸಿದ್ದೇವೆ. ಶಾಸಕರು ಸಮನ್ವಯ ಸಭೆಯಲ್ಲಿ ಸೂಚಿಸಿದಂತೆ ಗ್ರಾಮದ ಹಿತ ಕಾಯಲು ಎಲ್ಲರೂ ಬದ್ಧರಾಗಿದ್ದೇವೆ. | ವೀರಭದ್ರಪ್ಪ ಗೊಡಚಿ, ಶ್ರೀ ಸಿದ್ಧರಾಮೇಶ್ವರ ಸೇವಾ ಸಮಿತಿ ಅಧ್ಯಕ್ಷ