ಸ್ವಚ್ಛತೆಗಾಗಿ ಒಂದು ಹೆಜ್ಜೆ ಅಭಿಯಾನ ಅ. 2ರಂದು

24sirsi1 KAGERI
Published on

ಶಿರಸಿ: ದೀನದಯಾಳ್ ಟ್ರಸ್ಟ್ ವತಿಯಿಂದ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಸ್ವಚ್ಛತೆಗಾಗಿ ಒಂದು ಹೆಜ್ಜೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಗುರುವಾರ ನಗರದ ದೀನದಯಾಳ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನವು ದೇಶದ ಜನರಲ್ಲಿ ಜಾಗೃತಿ ಮೂಡಿಸಿದೆ. ಜನಾಂದೋಲನವಾಗಿ ರೂಪಿತಗೊಂಡಿದೆ. ಅಭಿಯಾನಕ್ಕೆ ಚಾಲನೆ ನೀಡಿ ಸುಮ್ಮನಾಗದೆ ಅದಕ್ಕೆ ಬೇಕಾದ ಯೋಜನೆಗಳನ್ನೂ ಜಾರಿಗೆ ತಂದು ಪ್ರೇರಣೆ ನೀಡಿದ್ದಾರೆ. ಅಕ್ಟೋಬರ್ 2ರಂದು ಜಿಲ್ಲಾದ್ಯಂತ ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದ್ದು, ಶಿರಸಿ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಗರ ಭಾಗದಲ್ಲಿ ಪ್ರತಿ ವಾರ್ಡ್​ನಲ್ಲಿ ಸಭೆ ನಡೆಸಿ ಸಂಘಟಿಸಲು ತೀರ್ವನಿಸಲಾಗಿದೆ. ನಿರ್ದಿಷ್ಟ ಸ್ಥಳದಲ್ಲೇ ಸ್ವಚ್ಛತಾ ಕಾರ್ಯ ನಡೆಸಬೇಕು ಎಂಬ ನಿಯಮವಿಲ್ಲ ಆದರೆ, ಎಲ್ಲೇ ನಡೆಸಿದರೂ ಗುಂಪಿನಲ್ಲೇ ಸ್ವಚ್ಛತಾ ಕಾರ್ಯ ಮಾಡಬೇಕು. ಜನಸಮುದಾಯದಲ್ಲಿ ಸ್ವಚ್ಛತೆಯ ಬಗ್ಗೆ ಇನ್ನಷ್ಟು ಅರಿವು ಮೂಡಿಸುವುದೇ ಈ ಅಭಿಯಾನ ಮತ್ತು ನಮ್ಮ ಉದ್ದೇಶವಾಗಿದೆ ಎಂದರು.

ಭಾರತೀಯ ಜನತಾ ಪಾರ್ಟಿ ಇದೊಂದು ರಾಷ್ಟ್ರೀಯ ಪಕ್ಷವಾಗಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪಕ್ಷ ಸಂಘಟನೆಯಲ್ಲಿ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯರು ಕ್ರಮ ಕೈಗೊಂಡಿದ್ದಾರೆ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿಯನ್ನು ಬಿಟ್ಟು ಯಾರೂ ಹೋಗುವುದಿಲ್ಲ. ಎಲ್ಲರೂ ಸೇರಿ ಬಿಜೆಪಿಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ.

ನಮ್ಮ ಸರ್ಕಾರವಿದ್ದ ಸಮಯದಲ್ಲಿ ಮಂಜೂರಾದ ಕಾಮಗಾರಿಗಳನ್ನು ಈ ಸರ್ಕಾರ ಅನುಷ್ಟಾನ ಮಾಡಬೇಕು. ನಾನು ಅಭಿವೃದ್ಧಿ ಮಾಡಿಲ್ಲ ಎಂದು ಹೊಸ ಶಾಸಕರನ್ನು ಜನರು ಆಯ್ಕೆ ಮಾಡಿದ್ದಾರೆ. ಈಗಿನ ಶಾಸಕರು ನನಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿ ತೋರಿಸಲಿ ಎಂದರು.

ಪ್ರಮುಖರಾದ ಎಸ್.ಎನ್. ಭಟ್, ರಾಜೇಶ್ ಶೆಟ್ಟಿ, ನಂದನ್ ಸಾಗರ್, ನಾಗರಾಜ ಶೆಟ್ಟಿ, ಸದಾನಂದ ಭಟ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net