ಹೊಸ ಭಾಷೆ, ಪದ ಕಲಿಯಲು ಮನ ಹಂಬಲಿಸಬೇಕು

IMG20241128205553.jpg
Published on

ಬೆಳಗಾವಿ: ಕನ್ನಡ ನನ್ನ ತಾಯಿ ಭಾಷೆ. ನಾನು ಹೈದರಾಬಾದ್‌ನಲ್ಲಿದ್ದಾಗಲೂ ಕನ್ನಡದಲ್ಲಿ ನಿರರ್ಗಳವಾಗಿ ಎಲ್ಲ ಸಂದರ್ಭದಲ್ಲೂ ಮಾತನಾಡುತ್ತಿದ್ದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ, ವಾದ್ಯಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಕೇವಲ 22 ದಿನಗಳಲ್ಲಿ ಕನ್ನಡ ಕಲಿತಿದ್ದೇನೆ. ಐಎಎಸ್ ಅಧಿಕಾರಿಯಾಗಿ 22 ದಿನಗಳಲ್ಲಿ ಕನ್ನಡ ಕಲಿಯಲು ಸಾಧ್ಯವಾದರೆ, ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಕನ್ನಡ ಕಲಿಯಲು ಸಾಧ್ಯವಿದೆ. ಹೊಸ ಭಾಷೆ, ಪದ ಕಲಿಯಲು ಮನ ಹಂಬಲಿಸಬೇಕು. ಹೊಸ ಕಲಿಕೆ ಹೊಸ ಅರ್ಥ ಹುಟ್ಟು ಹಾಕುತ್ತದೆ. ಹೊಸ ಭಾಷೆ ಕಲಿಕೆಯಿಂದ ಬದುಕಿಗೂ ಹೊಸ ಅರ್ಥ ಬರುತ್ತದೆ ಎಂದರು.

ನಮ್ಮ ಭಾಷೆಯಲ್ಲಿ ಬಳಕೆಗೆ ಪದಗಳು ಕೊರತೆ ಇದ್ದರೆ ಇತರ ಭಾಷೆಯ ಪದ ಬಳಸಬಹುದಾದರೂ ಮಾತೃ ಭಾಷೆಯ ಸೌಂದರ್ಯ ಹಾಳು ಮಾಡಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ಮಾತನಾಡಿ, ಮಾತೃ ಭಾಷೆ ಹೃದಯದ ಭಾಷೆ. ಮಾತೃ ಭಾಷೆಯಲ್ಲಿನ ಕಲಿಕೆಯಿಂದ ವಿಷಯ ಇನ್ನಷ್ಟು ಆಳವಾಗಿ ಅರ್ಥವಾಗುತ್ತದೆ. ಮಾತೃಭಾಷೆ ಜ್ಞಾನದ ಜತೆಗೆ ಕೌಶಲ ಕಲಿಸುತ್ತದೆ ಎಂದರು.

ಆದಿಚುಂಚನಗಿರಿ ವಿವಿ ಕುಲಸಚಿವ ಪ್ರೊ. ಸಿ.ಕೆ. ಸುಬ್ಬರಾಯ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಕುಲಸಚಿವರಾದ ಪ್ರೊ. ಬಿ.ಈ. ರಂಗಸ್ವಾಮಿ, ಪ್ರೊ. ಟಿ.ಎನ್.ಶ್ರೀನಿವಾಸ, ಡಾ.ಪ್ರಶಾಂತ ನಾಯಕ, ಪ್ರೊ. ಟಿ.ಎನ್. ಶ್ರೀನಿವಾಸ ಇದ್ದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ್ ಲೋಕಾಪುರ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಎಸ್.ಎಂ. ಚಲವಾದಿ, ಯಮುನಾಬಾಯಿ ಕಲಾಚಂದ್ರ ಅವರನ್ನು ಸನ್ಮಾನಿಸಲಾಯಿತು. ಬಳಿಕ ಭೈರವ ತಂಡದ ಕಲಾವಿದರು ಸಿತಾತ್ ಫ್ಯೂಷನ್ ವಾದ್ಯಗೋಷ್ಠಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net