ಒಲೆಯ ಕಿಚ್ಚು ತಲೆಗೆ ಬಾರದಂತೆ ಎಚ್ಚರ ವಹಿಸಬೇಕು; ಶ್ರೀಶೈಲ ಜಗದ್ಗುರುಗಳ ಕಿವಿಮಾತು, ಶ್ರೀಸಿದ್ಧಾಂತ ಶಿಖಾಮಣಿ ಪ್ರವಚನ

srisha
Published on

ಬೆಂಗಳೂರು: ಒಲೆಯಲ್ಲಿ ಇರಬೇಕಾದ ಕಿಚ್ಚು ಹೊಟ್ಟೆಯಲ್ಲಿ ಅಥವಾ ತಲೆಯಲ್ಲಿ ಬಂದರೆ ಅದು ದ್ವೇಷ ಮತ್ತು ಅಸೂಯೆಗಳ ರೂಪವನ್ನು ಪಡೆದು ಕುಟುಂಬದ ಸರ್ವನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಒಲೆಯಲ್ಲಿರಬೇಕಾದ ಕಿಚ್ಚು ತಲೆಯಲ್ಲಿ ಬಾರದಂತೆ ಎಚ್ಚರ ವಹಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.

ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ೌಂಡೇಶನ್ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂಸಾರದ ಶಬ್ದ ಸ್ಪರ್ಶಾದಿ ವಿಷಯಗಳು ದೇಹದಲ್ಲಿ ಇರಬೇಕೇ ಹೊರತು ಮನಸ್ಸಿನಲ್ಲಿ ಬರಬಾರದು. ಈ ಭ್ರಮೆಯನ್ನು ನಾಶಗೊಳಿಸಿ ವಾಸ್ತವಿಕತೆಯ ಅರಿವು ಮೂಡಿಸಲು ಗುರುವಿನ ಅಗತ್ಯವಿದೆ ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.

ಸಮಾರಂಭದಲ್ಲಿ ತುಮಕೂರು ತೊಟ್ಲುಕೆರೆ ಅಟವೀಶ್ವರ ಮಠದ ಶ್ರೀ ಶಿವಲಿಂಗ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಜನನದಿಂದ ಜಾತಿ ಬರುವುದಿಲ್ಲ, ಸಂಸ್ಕಾರದಿಂದ ಬರುತ್ತದೆ. ಹಿರಿಯರು ತಮ್ಮ ಮಕ್ಕಳಿಗೆ ಆಸ್ತಿ, ಸಂಪತ್ತು ನೀಡುವುದಕ್ಕಿಂತ ಹೆಚ್ಚಾಗಿ ಸಂಸ್ಕಾರ ನೀಡಬೇಕು ಎಂದರು.

ಮಹಾರಾಷ್ಟ್ರದ ನೂಲ ಶ್ರೀಸುರಗೀಶ್ವರ ಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರಿಭಂಟನಾಳ ಹಿರೇಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಅಭಾವೀಮ ಉಪಾಧ್ಯಕ್ಷ ಮೋಹನ್ ಕುಮಾರ್, ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಮತ್ತಿತರರು ಉಪಸ್ಥಿತರಿದ್ದರು.

"ಮಠಗಳಿಂದ ಸಂಸ್ಕೃತಿ, ಧರ್ಮ ಉಳಿದಿದೆ. ಶ್ರೀಶೈಲ ಜಗದ್ಗುರುಗಳು ಧರ್ಮ ಸಂಸ್ಕಾರದ ಅರಿವು ಮೂಡಿಸಲು ತಮ್ಮ ಪ್ರವಚನದ ಮೂಲಕ ಆಷಾಡದ ಅಶುಭ ಕಲ್ಪನೆಯನ್ನು ತೊಡೆದು ಹಾಕಿ ಶುಭ ಸಂದೇಶ ನೀಡಿದ್ದಾರೆ." -ವೀಣಾ ಕಾಶಪ್ಪನವರ್, ಅಭಾವೀಮ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net