ರಸ್ತೆ ಒಂದು ನಿಲ್ದಾಣ ಹನ್ನೊಂದು!

Smart city busstand
Published on

ಭರತ್ ಶೆಟ್ಟಿಗಾರ್ ಮಂಗಳೂರು

ಕ್ಲಾಕ್ ಟವರ್‌ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ಸುಮಾರು 500 ಮೀಟರ್ ರಸ್ತೆಯನ್ನು ಸ್ಮಾರ್ಟ್ ರಸ್ತೆಯಾಗಿ ಪರಿವರ್ತಿಸಲಾಗುತ್ತಿದ್ದು, ಅದರ ಭಾಗವಾಗಿ ಹಲವು ಕಾಮಗಾರಿ ನಿರ್ವಹಿಸಲಾಗಿದೆ. ರಸ್ತೆಯಲ್ಲಿ ಹಿಂದೆ ಇದ್ದಂತೆ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಮತ್ತಷ್ಟು ಅಂದ ಹೆಚ್ಚಿಸುವ ಕೆಲಸ ನಡೆಯುತ್ತಿದೆ.

ಆರ್‌ಟಿಒ ತಂಗುದಾಣ ನಗರದ ಪ್ರಮುಖ ಬಸ್ ನಿಲ್ದಾಣವಾಗಿದ್ದು, ರೈಲ್ವೆ ನಿಲ್ದಾಣ, ಮಾರುಕಟ್ಟೆ, ತಾಲೂಕು ಪಂಚಾಯಿತಿ, ಮಿನಿ ವಿಧಾನಸೌಧ, ವಿವಿ ಕಾಲೇಜು ಮೊದಲಾದೆಡೆ ಹೋಗಬೇಕಾದ ಪ್ರಯಾಣಿಕರು ಬಸ್‌ನಿಂದ ಇಲ್ಲೇ ಇಳಿಯುತ್ತಾರೆ. ಈ ಮೊದಲು ಇಲ್ಲಿ ವಿವಿಧ ರೂಟ್‌ಗಳ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ ನಿರ್ಮಿಸಲಾಗಿತ್ತು. ಸ್ಮಾರ್ಟ್ ರಸ್ತೆ ಹಾಗೂ ಫುಟ್‌ಪಾತ್ ಕಾಮಗಾರಿಗಾಗಿ ಅವುಗಳನ್ನು ತೆರವುಗೊಳಿಸಲಾಗಿತ್ತು. ಈಗ ಫುಟ್‌ಪಾತ್ ಕಾಮಗಾರಿ ಶೇ.99ಷ್ಟು ಪೂರ್ಣಗೊಂಡಿದ್ದು, ಮತ್ತೆ ನಿಲ್ದಾಣ ನಿರ್ಮಿಸಲಾಗುತ್ತಿದೆ.

ಖಾಸಗಿಯಾಗಿ ನಿರ್ಮಾಣ: ಈ ಹಿಂದೆ ಇದ್ದಂತೆ ಮತ್ತೆ ನಿಲ್ದಾಣ ನಿರ್ಮಿಸುವ ಪ್ರಕ್ರಿಯೆ ಆರಂಭವಾಗಿದೆ. ಶಿಕ್ಷಣ ವಿದ್ಯಾಲಯದಿಂದ ಆರ್‌ಟಿಒ ಕಚೇರಿವರೆಗೆ ಒಟ್ಟು 11 ನಿಲ್ದಾಣಗಳು ಬರಲಿವೆ. ಈ ಮೊದಲು ಇಲ್ಲಿನ ನಿಲ್ದಾಣವನ್ನು ನಿರ್ವಹಿಸುತ್ತಿದ್ದ ಜಾಹೀರಾತು ಸಂಸ್ಥೆಗಳೇ ಒಪ್ಪಂದ ಪ್ರಕಾರ ಹೊಸ ನಿಲ್ದಾಣ ನಿರ್ಮಿಸಿ ಬಳಿಕ ನಿರ್ವಹಿಸಲಿವೆ. ಜಾಹೀರಾತಿನಿಂದ ಬರುವ ಆದಾಯದ ಒಂದು ಭಾಗವನ್ನು ಮಹಾನಗರ ಪಾಲಿಕೆಗೆ ನೀಡಲಿದೆ. ನಿಲ್ದಾಣಗಳು ಒಂದೇ ರೀತಿ ಇರಬೇಕು ಎಂದು ಸ್ಮಾರ್ಟ್ ಸಿಟಿ ವತಿಯಿಂದ ನಕ್ಷೆ ತಯಾರಿಸಿಕೊಡಲಾಗಿದೆ. ಪ್ರಯಾಣಿಕರಿಗೆ ಆಸನ ವ್ಯವಸ್ಥೆಯೊಂದಿಗೆ, ಯಾವ ನಿಲ್ದಾಣದಲ್ಲಿ ಯಾವ ಬಸ್ ನಿಲ್ಲುತ್ತದೆ ಎಂಬ ಸೂಚನೆ, ಜಾಹೀರಾತುಗಳು ಇರಲಿವೆ.

ಫುಟ್‌ಪಾತ್‌ನಲ್ಲಿ ಲಾನ್: ಫುಟ್‌ಪಾತ್‌ನಲ್ಲಿ ಅಲ್ಲಲಿ ಖಾಲಿ ಜಾಗ ಬಿಡಲಾಗಿದ್ದು, ಅದರಲ್ಲಿ ಲಾನ್ ಮಾದರಿಯಲ್ಲಿ ಹಸಿರು ಬೆಳೆಸಲು ಉದ್ದೇಶಿಸಲಾಗಿದೆ. ಜತೆಗೆ ಪ್ರಸ್ತುತ ಡಿವೈಡರ್‌ನಲ್ಲಿ ಮಾತ್ರ ರಸ್ತೆಗೆ ಬೀಳುವಂತೆ ವಿದ್ಯುತ್ ಬೆಳಕು ಇದೆ. ಮುಂದಕ್ಕೆ ರಸ್ತೆಯ ಎರಡು ಬದಿಯಲ್ಲಿ ಲೈಟ್ ಕಂಬಗಳನ್ನು ನಿರ್ಮಿಸಿ ಒಂದೇ ಕಂಬದಲ್ಲಿ 9 ಮೀ. ಎತ್ತರಕ್ಕೆ ಬಲ್ಬ್ ಅಳವಡಿಸಿ ರಸ್ತೆಗೆ ಬೆಳಕು ಬೀಳುವಂತೆ ಹಾಗೂ 5 ಮೀ. ಎತ್ತರದಲ್ಲಿ ಬಲ್ಬ್ ಅಳವಡಿಸಿ ಫುಟ್‌ಪಾತ್‌ಗೆ ಬೆಳಕು ಬೀಳುವಂತೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಬಸ್ ನಿಲ್ದಾಣ ಸಹಿತ ಫುಟ್‌ಪಾತ್‌ಗೂ ಬೆಳಕು ಬಿದ್ದು, ಸಂಚರಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಹಿಂದೆ ಬಸ್ ನಿಲ್ದಾಣವನ್ನು ನಿರ್ವಹಿಸುತ್ತಿದ್ದ ಜಾಹೀರಾತು ಸಂಸ್ಥೆಯವರೇ ಈ ಬಸ್ ನಿಲ್ದಾಣವನ್ನೂ ನಿರ್ವಹಿಸಲಿದ್ದಾರೆ. ಆದ್ದರಿಂದ ಏಕರೂಪದ ನಿಲ್ದಾಣ ಇರಬೇಕು ಎನ್ನುವ ನಿಟ್ಟಿನಲ್ಲಿ ನಾವು ಡಿಸೈನ್ ರಚಿಸಿಕೊಟ್ಟಿದ್ದು, ಅದರಂತೆ ಅವರೇ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಅರುಣ್ ಪ್ರಭಾ ಕೆ.ಎಸ್ ಜನರಲ್ ಮ್ಯಾನೇಜರ್, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net