ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ನಲ್ಲಿ ಕಶ್ವೀಗೆ ಬೆಳ್ಳಿ

15
Published on

ಮೈಸೂರು: ನಗರದ ಹೆಬ್ಬಾಳದ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಕಶ್ವೀ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 19ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದಾರೆ.

14 ವರ್ಷದೊಳಗಿನ ಬಾಲಕಿರ ವಿಭಾಗದ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಕೂಟದಲ್ಲಿ 6 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಮೈಸೂರು ಜಿಲ್ಲೆಯಿಂದ 13 ಅಥ್ಲಿಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 2011ರ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ, ದ್ಯುತಿ ಚಾಂದ್ ಅವರು ಕಶ್ವೀ ಅವರಂತೆಯೇ ಸ್ಪರ್ಧಿಸಿದ್ದರು. ಇಂದು ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಕಾರ್ಯದರ್ಶಿ ಬಿ.ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಶ್ವೀ ಅವರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ಕೋಚ್ ಜಿ.ಆರ್.ಪ್ರಭಾಕರ್ ತರಬೇತಿ ನೀಡುತ್ತಿದ್ದಾರೆ. ಮಗಳ ಸಾಧನೆಗೆ ಪಾಲಕರಾದ ಸತ್ಯಜಿತ್ ಹಾಗೂ ವೈಶಾಲಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net