ಅರಬೈಲ್ ಪ್ರಪಾತದಲ್ಲೊಂದು ಜಲಪಾತ

18 YLP 01
Published on

ಶ್ರೀಧರ ಅಣಲಗಾರ ಯಲ್ಲಾಪುರ

ತಾಲೂಕಿನ ಮಾಗೋಡ, ಸಾತೊಡ್ಡಿ, ಶಿರಲೆ ಜಲಪಾತಗಳು ರಾಜ್ಯಮಟ್ಟದ ಪ್ರಸಿದ್ಧಿ ಪಡೆದಿವೆ. ಆದರೆ, ಪ್ರಸಿದ್ಧಿ, ಪ್ರಚಾರಗಳ ಹಂಗಿಲ್ಲದೆ ಧುಮ್ಮಿಕ್ಕುವ ಹತ್ತಾರು ಜಲಪಾತಗಳು ತಾಲೂಕಿನ ನಿಸರ್ಗದ ಮಡಿಲಿನಲ್ಲಿವೆ. ಅವುಗಳಲ್ಲಿ ಅರಬೈಲ್ ಜಲಪಾತವೂ ಒಂದು.

ಹೆಸರು ಕೇಳಿದಾಕ್ಷಣ ಅಪಾಯಕಾರಿ ತಿರುವುಗಳು, ಅಪಘಾತ, ಗುಡ್ಡ ಕುಸಿತಗಳಂತಹ ಘಟನೆಗಳ ಕಲ್ಪನೆಯನ್ನೇ ನೀಡುವ ಅರಬೈಲ್ ಸಮೀಪದ ಕಾಡಿನಲ್ಲೊಂದು ಸುಂದರ ಜಲಪಾತವಿದೆ. ದಟ್ಟ ಕಾನನದ ನಡುವೆ ಪ್ರಕೃತಿಯ ವಿಸ್ಮಯವನ್ನು ಅನಾವರಣಗೊಳಿಸಿದೆ. ಸುಮಾರು 160 ಅಡಿಗಳಿಗಿಂತಲೂ ಹೆಚ್ಚು ಎತ್ತರದಿಂದ ವರ್ಷವಿಡೀ ಧುಮುಕುವ ಈ ಜಲಧಾರೆ ಎಂಟು ಮೆಟ್ಟಿಲುಗಳ ಆಕಾರದಲ್ಲಿ ಹಂತ ಹಂತವಾಗಿ ಧುಮುಕುವ ಪರಿ ರಮಣೀಯವಾದುದು. ಹೆಸರಿಲ್ಲದ ಜಲಪಾತಕ್ಕೆ, ಸಮೀಪದ ಊರಿನಿಂದ ಬಂದ ಹೆಸರು ‘ಅರಬೈಲ್ ಜಲಪಾತ’.

ತಾಲೂಕಿನ ಸುತ್ತಮುತ್ತಲಿನ ಜನತೆ ಹಾಗೂ ಸ್ಥಳೀಯ ಪ್ರವಾಸಿಗರಿಗೆ ಮಾತ್ರ ತಿಳಿದಿರುವ ಈ ಜಲಧಾರೆ ನಾಗರಿಕ ಜಗತ್ತಿನ ಪ್ರಚಾರದಲ್ಲಿ ಹಿಂದಿನ ಸಾಲಿನಲ್ಲಿಯೇ ಕುಳಿತಿದೆ. ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗುವಾಗ ದೂರದ ಗುಡ್ಡದಲ್ಲೆಲ್ಲೋ ಒಂದಕ್ಷರದ ಅಂಕೆಯಂತೆ ಕಂಡೂ ಕಾಣದ ಹಾಗೆ ಗೋಚರಿಸುವ ಈ ಜಲಪಾತ ಹತ್ತಿರದಿಂದ ಬಲ್ಲವರಿಗೆ ಸ್ವರ್ಗ ಸುಖವನ್ನೇ ನೀಡುತ್ತದೆ. ಎಂಟು ಹಂತಗಳಲ್ಲಿ ಧುಮುಕುವ ಈ ಜಲಧಾರೆ ಚಾರಣ ಪ್ರಿಯರಿಗಂತೂ ಹೇಳಿ ಮಾಡಿಸಿದಂತಿದೆ. ಉತ್ಸಾಹವಿದ್ದರೆ ಎಂಟನೇ ಹಂತದ ತುದಿಯವರೆಗೂ ಸಾಗಿ ನೀರಿನೊಂದಿಗೆ ವಿಜೃಂಭಿಸುವುದಕ್ಕೂ ಅವಕಾಶವಿದೆ. ಆದರೆ ಜಾಗರೂಕತೆ ಅತ್ಯಗತ್ಯ.

ಸಾಗುವುದು ಹೇಗೆ?: ಯಲ್ಲಾಪುರದಿಂದ ಕಾರವಾರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ 15 ಕಿ.ಮೀ ಸಾಗಿದರೆ ಅರಬೈಲ್ ಸಮೀಪ ಹೆದ್ದಾರಿಯಿಂದ ಕೇವಲ ಒಂದು ಕಿ.ಮೀ. ಮಾತ್ರ ದೂರದಲ್ಲಿ ಈ ಜಲಪಾತ ಸಿಗುತ್ತದೆ. ಜಲಪಾತದವರೆಗೂ ದ್ವಿಚಕ್ರವಾಹನಗಳ ಮೂಲಕ ತಲುಪಬಹುದು.

ಮೂಲ ಸೌಕರ್ಯಗಳನ್ನು ಅರಬೈಲ್ ಜಲಪಾತಕ್ಕೆ ಒದಗಿಸಿ, ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗುವ ಎಲ್ಲ ಸಾಧ್ಯತೆಯಿದೆ. ಈ ಬಗೆಗೆ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಗಮನ ಹರಿಸಬೇಕು. | ಮುರಗೇಶ ಅರಬೈಲ್ ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net