ಅಧಿಕಾರದ ಚುಕ್ಕಾಣಿಗಾಗಿ ಒಂದಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್

5dbp3(bjp+cong+jds)
Published on

ದೊಡ್ಡಬಳ್ಳಾಪುರ: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗಳಲ್ಲಿ ಕೆಲವೆಡೆ ಅವಿರೋಧ ಆಯ್ಕೆಯಾದರೆ, ಇನ್ನೂ ಕೆಲವೆಡೆ ಬಹುಮತ ಪಡೆದ ಪಕ್ಷದ ಬೆಂಬಲಿಗರು ಆಯ್ಕೆಯಾಗಿದ್ದಾರೆ. ಆದರೆ, ಇಲ್ಲೊಂದು ಗ್ರಾಪಂನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ಅಧಿಕಾರದ ಚುಕ್ಕಾಣಿ ಹಿಡಿದಿವೆ.

34 ಸ್ಥಾನಗಳಿರುವ ಕೊಡಿಗೇಹಳ್ಳಿ ಪಂಚಾಯಿತಿಯಲ್ಲಿ ಯಾವುದೇ ಪಕ್ಷದ ಬೆಂಬಲಿಗರಿಗೆ ಬಹುಮತ ಬಂದಿರಲಿಲ್ಲ. ಕಾಂಗ್ರೆಸ್ ಬೆಂಬಲಿತ 14, ಬಿಜೆಪಿ ಬೆಂಬಲಿತ 11 ಹಾಗೂ ಜೆಡಿಎಸ್ ಬೆಂಬಲಿತ 09 ಸದಸ್ಯರು ಆಯ್ಕೆಯಾಗಿದ್ದರು. ಅಧಿಕಾರದ ಚುಕ್ಕಾಣಿಯ ಮ್ಯಾಜಿಕ್ ನಂಬರ್ 18ಕ್ಕೆ ಯಾವ ಪಕ್ಷದವರೂ ಏರಿರಲಿಲ್ಲ.

ಹೀಗಾಗಿ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಹಾಗೂ ಬಿಜೆಪಿಯ ಮುಖಂಡ ಮುನಿರಾಮೇಗೌಡ ಒಮ್ಮತದಿಂದ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾರೆ.

ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಪಂ ಸ್ಥಾನಗಳನ್ನು ಕೊಡಿಗೇಹಳ್ಳಿ ಗ್ರಾಪಂ ಹೊಂದಿದೆ. ಯಾರಿಗೂ ಬಹುಮತವಿಲ್ಲದ ಕಾರಣ ಶಾಸಕರು, ಜೆಡಿಎಸ್ ಜಿಲ್ಲಾಧ್ಯಕ್ಷರ ಜತೆ ಮಾತನಾಡಿ ಮೈತ್ರಿ ಮಾಡಿದ್ದರು. ಬಳಿಕ ಈ ಭಾಗದ ಬಿಜೆಪಿ ಹಿರಿಯ ಮುಖಂಡ ಮುನಿರಾಮೇಗೌಡರ ಕೈಜೋಡಿಸಿದ ಬಳಿಕ ಮೂರೂ ಪಕ್ಷದ ನಾಯಕರು ಅಧಿಕಾರ ಹಂಚಿಕೆ ಸೂತ್ರದಡಿ ಒಂದಾಗಿದ್ದೇವೆ. ಜೆಡಿಎಸ್‌ನ ಹಸನಘಟ್ಟ ಮುನಿರಾಜು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಗೌರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಪಂ ಸದಸ್ಯ ಹಸನಘಟ್ಟ ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net