

ತುಮಕೂರು: ಮಹಾಮಾರಿ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಅನ್ನುವಷ್ಟರಲ್ಲಿ ಮತ್ತೊಂದು ಕರೊನಾ ಪಾಸಿಟಿವ್ ಪ್ರಕರಣ ತುಮಕೂರಿನಲ್ಲಿ ಪತ್ತೆಯಾಗಿದೆ. ಗುಜರಾತ್ ಮೂಲದ 32 ವರ್ಷದ ಧರ್ಮಪ್ರಚಾರಕನಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಗರದ ಪೂರ್‌ಹೌಸ್ ಕಾಲನಿಯ ನಿಮ್ರಾ ಮಸೀದಿಯಲ್ಲಿ ತಂಗಿದ್ದ ಗುಜರಾತ್‌ನ ಸೂರತ್ ಮೂಲದ 14 ಮಂದಿ ಧರ್ಮ ಪ್ರಚಾರಕರಲ್ಲಿ 32 ವರ್ಷದ ವ್ಯಕ್ತಿ (ಪಿ-447)ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೊರರಾಜ್ಯದವರು ಹಾಗೂ ಜಿಲ್ಲೆಯವರನ್ನು ರ‌್ಯಾಂಡಮ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿದೆ. ಜ್ವರದಿಂದ ಬಳಲುತ್ತಿರುವ ಈತನನ್ನು ಜಿಲ್ಲಾ ಕರೊನಾ ಆಸ್ಪತ್ರೆಯ ಐಸೋಲೇಷನ್‌ನಲ್ಲಿರಿಸಲಾಗಿದೆ. ಜತೆಯಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರಿಗೂ ನೆಗೆಟಿವ್ ಬಂದಿದೆ. ಎಲ್ಲರನ್ನೂ ಮಸೀದಿಯಲ್ಲೇ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈತನ ಪ್ರೈಮರಿ, ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದ್ದು, ಕ್ವಾರಂಟೈನ್ ಮಾಡಲಾಗಿದೆ.
ಟ್ರಾವೆಲ್ ಹಿಸ್ಟರಿ: ಮಾ.12ರಂದು ಗುಜರಾತ್‌ನ ಸೂರತ್‌ನಿಂದ ತುಮಕೂರು ಜಿಲ್ಲೆಗೆ ಧರ್ಮಬೋಧನೆಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿ ನಗರದ ಪೂರ್‌ಹೌಸ್ ಕಾಲನಿ (ಪಿಎಚ್ ಕಾಲನಿ)ಯ ನಿಮ್ರಾ ಮಸೀದಿಯಲ್ಲೇ ತಂಗಿದ್ದರು. ಲಾಕ್‌ಡೌನ್ ಜಾರಿಯಾದ ಬಳಿಕ ಗುಜರಾತ್‌ಗೆ ಮರಳಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಮಸೀದಿಯಲ್ಲೇ 14 ಮಂದಿ ಆಶ್ರಯ ಪಡೆದುಕೊಂಡಿದ್ದರಾದರೂ ಅಷ್ಟಾಗಿ ನಗರದಲ್ಲಿ ಸುತ್ತಾಡಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪಿಎಚ್ ಕಾಲನಿ ಸೀಲ್‌ಡೌನ್!: ಕರೊನಾ ಸೋಂಕಿತ ವ್ಯಕ್ತಿ ತಂಗಿದ್ದ ಪೂರ್ ಹೌಸ್ ಕಾಲನಿಯ ನಿಮ್ರಾ ಮಸೀದಿ ಸುತ್ತಮುತ್ತ 150 ಮೀಟರ್ ವ್ಯಾಪ್ತಿ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 10ರ ಪಿಎಚ್ ಕಾಲನಿಯ ಎಲ್ಲ ಸಂಪರ್ಕ ರಸ್ತೆಗಳನ್ನು ಕಬ್ಬಿಣದ ಶೀಟ್‌ಗಳಿಂದ ಬಂದ್ ಮಾಡಿದ್ದು ಸೀಲ್ಡೌನ್ ವ್ಯಾಪ್ತಿಯಲ್ಲಿ ಜನ ಹೊರಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ 25 ದಿನಗಳಿಂದ ಯಾವುದೇ ಕರೊನಾ ಪ್ರಕರಣಗಳಿಲ್ಲದೆ ಜಿಲ್ಲೆ ಬಹುತೇಕ ಕರೊನಾ ಮುಕ್ತ ಎನ್ನುವ ಹಂತದಲ್ಲಿದ್ದಾಗ ಪ್ರಕರಣ ಕಾಣಿಸಿಕೊಂಡಿರುವುದು ಕಲ್ಪತರು ನಾಡಿನ ಜನರಲ್ಲಿ ಆತಂಕ ಸೃಷ್ಟಿಸಿದೆ.
ಗುಜರಾತ್ ಮೂಲದ 32 ವರ್ಷದ ವ್ಯಕ್ತಿಗೆ ಸೋಂಕಿರುವುದು ದೃಢ ಪಟ್ಟಿದೆ. ಈತನ ಪ್ರೈಮರಿ, ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈತ ಆಶ್ರಯ ಪಡೆದಿದ್ದ ನಿಮ್ರಾ ಮಸೀದಿಯ ಪೂರ್‌ಹೌಸ್ ಕಾಲನಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಆತಂಕಪಡುವ ಅಗತ್ಯವಿಲ್ಲ. ಅಗತ್ಯವಸ್ತುಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಭರವಸೆ ಸಹ ಕೊಡಲಾಗಿದೆ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ