ನಗರದಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಿಂದ ವಂಚನೆ; ಸಂಸ್ಥೆಯ ಉದ್ಯೋಗಿ ಅಡವಿಟ್ಟ ಚಿನ್ನವನ್ನೂ ಕೊಡದೆ ಮೋಸಗೈದ ಸಂಸ್ಥೆ

Untitled-1
Published on

ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ, ಶ್ರೀ ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯ ವಂಚನೆ ಪ್ರಕರಣಗಳ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿ ವಂಚನೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಗ್ರಾಹಕರು ನೀಡಿದ ದೂರಿನ ಮೇರೆಗೆ ಸೊಸೈಟಿ ಮುಖ್ಯಸ್ಥ, ಕಾರ್ಯನಿರ್ವಾಹಕ ಸೇರಿ ಸಿಬ್ಬಂದಿ ಮೇಲೂ ಎಫ್​ಐಆರ್ ದಾಖಲಾಗಿದೆ.

ಶೆಟ್ಟಿಹಳ್ಳಿ ನಿವಾಸಿ ಸುಮಲತಾ ಎಂಬವರು ಕೊಟ್ಟ ದೂರಿನ ಆಧಾರದ ಮೇಲೆ ಜಾಲಹಳ್ಳಿಯ ಶೆಟ್ಟಿಹಳ್ಳಿಯಲ್ಲಿರುವ ಬೃಹತ್​ ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಮುಖ್ಯಸ್ಥ ಶಿರೀಶ್ ಹೆಗ್ಡೆ, ಕಾರ್ಯನಿವಾಹಕರಾದ ಲೋಕೇಶ್, ಸೂರ್ಯಕಾಂತ್, ಸೊಸೈಟಿಯ ಇತರ ಸಿಬ್ಬಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಬೃಹತ್​ ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ವಿರುದ್ಧ ಇದುವರೆಗೆ ಒಟ್ಟು 24 ಮಂದಿ ಗ್ರಾಹಕರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರಿಗೆ ಒಟ್ಟು 10 ಲಕ್ಷ ರೂ. ವರೆಗೆ ವಂಚನೆ ಆಗಿರುವುದು ಕಂಡು ಬಂದಿದೆ. 2019ರ ಡಿಸೆಂಬರ್‌ನಲ್ಲಿ ಸೊಸೈಟಿ ಆರಂಭಿಸಲಾಗಿತ್ತು. ಸೊಸೈಟಿ ಮಾಲೀಕರು ಸಾರ್ವಜನಿಕರಿಂದ ಪಿಗ್ಮಿ ಹಣ ಸಂಗ್ರಹಿಸಿ ಅದನ್ನು ಮರಳಿಸದೇ ಕಚೇರಿಯನ್ನು ಮುಚ್ಚಿ ಹೋಗಿರುವುದು ಗೊತ್ತಾಗಿದೆ. ಎಫ್​ಐಆರ್ ದಾಖಲಾದರೂ ಆಡಿಟ್ ಪರಿಶೀಲನೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

ವಿಕಾಸ್ ಎಂಬುವವರಿಂದ 57 ಸಾವಿರ ರೂ., ಗೌತಮ್‌ ಎಂಬವರಿಂದ 1.37 ಲಕ್ಷ ರೂ., ಶಿವಯ್ಯ ಎಂಬವರಿಂದ 22 ಸಾವಿರ ರೂ., ಶಿವರಾಜ್‌ ಎಂಬವರಿಂದ 36 ಸಾವಿರ ರೂ. ಪಿಗ್ಮಿ ಕಟ್ಟಿಸಿಕೊಂಡು, ರಂಜಿತ್ ಎಂಬುವವರಿಂದ 2 ಲಕ್ಷ ರೂ. ಠೇವಣಿ ಕಟ್ಟಿಸಿಕೊಂಡು ಹಣ ಕೊಡದೇ ವಂಚಿಸಿದ್ದಾರೆ ಎಂದು ಎಫ್​ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಒಡವೆ ನೀಡದೆ ಮಹಿಳೆಗೆ ವಂಚನೆ

ದೂರುದಾರರಾಗಿರುವ ಸುಮಲತಾ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಹಾಗೂ ಗೋಲ್ಡ್ ಪ್ಲೆಡ್ಜರ್ ಆಗಿ ಕೆಲಸಕ್ಕೆ ಸೇರಿದ್ದರು. ಹಣಕಾಸಿನ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ 2020 ಸೆ.7ರಂದು ಅವರ ಬಳಿಯಿದ್ದ 11.270 ಗ್ರಾಂ ಚಿನ್ನಾಭರಣವನ್ನು ಸೊಸೈಟಿಯಲ್ಲಿ ಅಡಮಾನವಿಟ್ಟು 3.85 ಲಕ್ಷ ರೂ. ಪಡೆದುಕೊಂಡಿದ್ದರು. ಅಡಮಾನವಿಟ್ಟ ಒಡವೆಯ ಬಡ್ಡಿಯನ್ನು ಪ್ರತಿ ತಿಂಗಳು ವೇತನದಲ್ಲಿ ಕಡಿತಗೊಳಿಸುತ್ತಿದ್ದರು. ಇದಾದ ಬಳಿಕ ಒಡವೆಗಳನ್ನು ಬಿಡಿಸಿಕೊಳ್ಳಲು ಹೋದಾಗ ನಾಳೆ ಬನ್ನಿ ಎಂದು ಸಬೂಬು ಹೇಳಿ ಇದುವರೆಗೂ ಒಡವೆಗಳನ್ನು ಕೊಟ್ಟಿಲ್ಲ ಎಂದು ಸುಮಲತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net