

ರಟ್ಟಿಹಳ್ಳಿ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ವಣದ ಹಿನ್ನೆಲೆಯಲ್ಲಿ ವಿವಾಹವಾಗಿ 10 ದಿನವಷ್ಟೇ ಕಳೆದಿದ್ದ ಯೋಧ ಆನಂದ ಬಿಳಚಿ ಭಾರತೀಯ ಸೇನೆಯ ಕರೆಯ ಮೇರೆಗೆ ಭಾನುವಾರ ಕರ್ತವ್ಯಕ್ಕೆ ತೆರಳಿದ್ದಾರೆ.
ಯೋಧನಿಗೆ ಪಟ್ಟಣದ ಸಾರ್ವಜನಿಕರು ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು. ಕ್ಷೇಮದೊಂದಿಗೆ ಮರಳಿ ಊರಿಗೆ ಬರುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಪಟ್ಟಣದ ನಿವಾಸಿ ಆನಂದ ಬಿಳಚಿ ಕಳೆದ 2 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮಹಾರಾಜ ಗಂಜ್ ಬೆಟಾಲಿಯನ್ ಎಸ್.ಎಸ್.ಬಿ. ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಾಹ ನಿಮಿತ್ತ 1 ತಿಂಗಳು ರಜೆ ಪಡೆದು ಬಂದಿದ್ದರು. ಆದರೆ, ಯುದ್ಧದ ಪರಿಸ್ಥಿತಿಯಲ್ಲಿ ಸೇನೆಯ ಕರೆಯ ಮೇರೆಗೆ 20 ದಿವಸಗಳ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ.
ಸ್ಥಳೀಯ ನಿವಾಸಿ ರಾಜು ವೆರ್ಣೆಕರ ಮಾತನಾಡಿ, ದೇಶದ ರಕ್ಷಣೆಯ ಜವಾಬ್ದಾರಿಯನ್ನು ಭಾರತೀಯ ಸೇನೆ ಅಚ್ಚುಕಟ್ಟಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತಿದೆ. ನಾವೆಲ್ಲರೂ ಇಲ್ಲಿ ಸುರಕ್ಷಿತವಾಗಿರಲು ಗಡಿಯಲ್ಲಿರುವ ಸೇನೆಯೇ ಕಾರಣ. ಯೋಧರಿಗೆ ಯಾವುದೇ ಹಾನಿಯಾಗದಂತೆ ಭಗವಂತ ರಕ್ಷಣೆ ನೀಡಲಿ ಎಂದು ಪ್ರಾರ್ಥಿಸಿದ್ದೇವೆ. ಸೈನಿಕರು ಮೊದಲು ದೇಶ, ನಂತರ ಕುಟುಂಬ ಎಂಬ ಭಾವನೆ ಹೊಂದಿರುತ್ತಾರೆ. ಯೋಧ ಆನಂದ ಬಿಳಚಿ ವಿವಾಹವಾಗಿ ಕೇವಲ 10 ದಿವಸ ಕಳೆದಿದ್ದರೂ ಸೇನೆಯ ಆದೇಶದಂತೆ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಅವರಿಗೆ ನಮ್ಮೆಲ್ಲರ ಸಲಾಂ ಎಂದು ಹೇಳಿದರು.
ಶಿವರಾಜ ಗೂಳಪ್ಪನವರ, ಮೃತ್ಯುಂಜಯ ಬೆಣ್ಣಿ, ಮಾಲತೇಶ ಬೆಣ್ಣಿ, ಬಿ.ಎಸ್. ಪಾಟೀಲ, ಕುಮಾರ ಗೌಡರ, ಚೆನ್ನಬಸಪ್ಪ ಹೊಸಮನಿ, ರಾಘವೇಂದ್ರ ನಾಯಕ, ಸಂತೋಷ ಮುದರಕೋರ, ಕೃಷ್ಣ ಮಾಯಚಾರಿ, ಅರುಣ ಬಿಳಚಿ, ಜ್ಯೋತಿ ವೆರ್ಣೆಕರ, ಶ್ವೇತಾ ರಾಯ್ಕರ ಇತರರು ಉಪಸ್ಥಿತರಿದ್ದರು.