ಒಂದು ಆಸ್ಪತ್ರೆಯಲ್ಲಿ ಪಾಸಿಟಿವ್‌, ಇನ್ನೊಂದರಲ್ಲಿ ನೆಗೆಟಿವ್‌: ಯಾವುದು ನಂಬ್ಲಿ ಸರ್‌?

man
Published on

ಬೆಳಗಾವಿ: ಕರೊನಾ ಶಂಕಿತ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌- ನೆಗೆಟಿವ್‌ ಎರಡೂ ವರದಿ ಬಂದಿದ್ದು, ಎರಡೂ ರಿಪೋರ್ಟ್‌ ಹಿಡಿದು ವ್ಯಕ್ತಿ ತಲೆಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.

ಇದು ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಜಿಲ್ಲೆಯ ಅಥಣಿಯ ಕರೊನಾ ಶಂಕಿತ ವ್ಯಕ್ತಿ ಎರಡು ಕಡೆ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು.

ಜುಲೈ 15ರಂದು ಅಥಣಿಯಲ್ಲಿ ಗಂಟಲು ದ್ರವದ ಮಾದರಿಯನ್ನು ನೀಡಿದ್ದರೆ, ಜುಲೈ 16ರಂದು ಬೆಳಗಾವಿಯ ಆಸ್ಪತ್ರೆಯಲ್ಲಿ ಕರೊನಾ ವೈರಸ್‌ ಪರೀಕ್ಷೆ ಮಾಡಿಸಿಕೊಂಡು ಅಲ್ಲಿಯೇ ದಾಖಲಾಗಿದ್ದರು. ಜುಲೈ 18ರಂದು ಬೆಳಗಾವಿ ಆಸ್ಪತ್ರೆ ವರದಿ ನೀಡಿದ್ದು ಅದರಲ್ಲಿ ಕರೊನಾ ನೆಗೆಟಿವ್ ಎಂದು ಇದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ನೆಗೆಟಿವ್‌ ವರದಿ ನೋಡಿ ಆ ದಿನವೇ ಡಿಸ್ಚಾರ್ಜ್ ಮಾಡಲಾಗಿತ್ತು.

ಸದ್ಯ ತಮಗೆ ಕರೊನಾ ನೆಗೆಟಿವ್ ಇದೆ ಎಂದು ಖುಷಿಯಿಂದ ಮನೆಗೆ ಅವರು ಹೋಗಿದ್ದರು. ಇದೀಗ ದೊಡ್ಡ ತಲೆನೋವಾಗಿರುವುದು ಜುಲೈ 15ರಂದು ನೀಡಿದ್ದ ಸ್ವ್ಯಾಬ್ ರಿಪೋರ್ಟ್ ಬಂದ ಮೇಲೆ. ಇದು ಇವರ ಕೈ ಸೇರಿರುವುದು ಜುಲೈ 25ರಂದು.

ಅದರಲ್ಲಿ ಕರೊನಾ ಪಾಸಿಟಿವ್‌ ಎಂದು ವರದಿ ಬಂದಿದೆ. ಇದರಿಂದ ಗಾಬರಿಗೊಂಡ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇವಲ ಒಂದು ದಿನದ ಅಂತರದಲ್ಲಿ ಈ ರೀತಿ ಭಿನ್ನ ಭಿನ್ನ ರಿಪೋರ್ಟ್‌ ಬರಲು ಹೇಗೆ ಸಾಧ್ಯ? ಹಿಂದಿನ ದಿನ ಒಂದು ಕಡೆ ಮಾರನೆಯ ದಿನ ಇನ್ನೊಂದು ಕಡೆ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಒಂದೇ ದಿನದಲ್ಲಿ ಈ ಅಂತರ ಏಕೆ? ನನಗೆ ನಿಜವಾಗಿಯೂ ಪಾಸಿಟಿವ್‌ ಇದೆಯೋ, ನೆಗೆಟಿವ್‌ ಇದೆಯೋ ಎಂದು ಹೇಗೆ ಗೊತ್ತಾಗುವುದು ‌? ಇಂಥ ರಿಪೋರ್ಟ್‌ ನಂಬೋದಾದ್ರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸದ್ಯ ಅಧಿಕಾರಿಗಳು ಏನೂ ಹೇಳದೇ ಸುಮ್ಮನಾಗಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net