

ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ ಹರಿಸೇವೆಗೆ ರಾಜ್ಯದ ವಿವಿಧ ಭಾಗದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾವರೆ ಎಲೆಯಲ್ಲಿ ಊಟ ಸವಿದದ್ದು, ವಿಶೇಷವಾಗಿತ್ತು.
ಭಾನುವಾರ ದೇಗುಲದ ಆವರಣದಲ್ಲಿ ನಡೆದ ಹರಿಸೇವೆಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದು ತೋಪಿನ ತಿಮ್ಮಪ್ಪನ ಕೃಪೆಗೆ ಪಾತ್ರರಾದರು.
ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಅನ್ನಸಂತರ್ಪಣೆ ಮಧ್ಯಾಹ್ನ 12 ಗಂಟೆವರೆಗೆ ನಡೆಯಿತು. ಭಕ್ತರು ತಾವರೆ ಎಲೆಯಲ್ಲಿ ಊಟ ಸೇವಿಸಿದರು. ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ತೋಪಿನ ತಿಮ್ಮಪ್ಪ ದೇವರ ದರ್ಶನ ಪಡೆದು ಪುನೀತರಾದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ತಾವರೆ ಎಲೆಯಲ್ಲಿ ಅನ್ನ, ಸಾಂಬಾರ್, ಬೆಲ್ಲದ ಅನ್ನ ಹಾಗೂ ಕುಂಬಳಕಾಯಿ ಪಲ್ಯವನ್ನು ಭಕ್ತರಿಗೆ ಬಡಿಸಲಾಯಿತು.
ದೇಗುಲದ ಧರ್ಮದರ್ಶಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಕುಟುಂಬ ಸಮೇತ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಕೃಷ್ಣೇಗೌಡ ಮಾತನಾಡಿ, ತೋಪಿನ ತಿಮ್ಮಪ್ಪ ದೇವರ ಹರಿಸೇವೆ ಉತ್ಸವದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ತಾವರೆ ಎಲೆಯಲ್ಲಿ ಊಟ ಮಾಡಿದರು. ಹರಿಸೇವೆಗೆ 26 ಹಂಡೆಯಲ್ಲಿ ಸಾಂಬಾರು ಮಾಡಲಾಗಿತ್ತು. 1 ಕೊಪ್ಪರಿಕೆಯಲ್ಲಿ 2 ಕ್ವಿಂಟಾಲ್ ಅಕ್ಕಿಯಂತೆ ಸುಮಾರು 65 ಕೊಪ್ಪರಿಕೆಯಲ್ಲಿ ಸುಮಾರು 130 ಕ್ವಿಂಟಾಲ್ ಅಕ್ಕಿಯಲ್ಲಿ ಅನ್ನ ಮಾಡಲಾಗಿತ್ತು. ಸುಮಾರು 13 ಕ್ವಿಂಟಾಲ್ ಬೇಳೆ, 2 ಕ್ವಿಂಟಾಲ್ ಹುಣಸೇಹಣ್ಣು, ಇದರ ಜತೆಗೆ ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪು ಬಳಸಿ ಸಾಂಬಾರ್ ಮಾಡಲಾಗಿತ್ತು. ಸಿದ್ದಪಡಿಸಿದ್ದ ಎಲ್ಲ ಊಟ ಬಹುತೇಕ ಖಾಲಿ ಆಯಿತು ಎಂದರು.
ಹರಿಸೇವೆಗೆ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು, ಗ್ರಾಮದ ಯಜಮಾನುರುಗಳು, ಯುವಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸುತ್ತ ಮತ್ತಲ ಗ್ರಾಮಸ್ಥರು ಸೇರಿದಂತೆ ಹಲವರು ಹರಿಸೇವೆಯಲ್ಲಿ ಭಾಗವಹಿಸಿ ಅಗತ್ಯ ಸಹಕಾರ ನೀಡಿ ಹರಿಸೇವೆ ಯಶಸ್ವಿಯಾಗಲು ಸಹಕಾರ ನೀಡಿದರು ಎಂದು ಹರ್ಷ ವ್ಯಕ್ತಪಡಿಸಿದರು.