

ಎನ್.ಆರ್.ಪುರ: ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬುದು ಶೃಂಗೇರಿ ಶ್ರೀ ಮಠದ ಆಶಯವಾಗಿದೆ ಎಂದು ಶೃಂಗೇರಿ ಮಠದ ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದರು.
ಬುಧವಾರ ಅಗ್ರಹಾರದ ತಾಲೂಕು ಬ್ರಾಹ್ಮಣ ಮಹಾ ಸಭಾದ ಕಚೇರಿ ಸಭಾಂಗಣದಲ್ಲಿ ಶೃಂಗೇರಿ ಮಠ ಹಾಗೂ ತಾಲೂಕು ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಶೃಂಗೇರಿ ಭಾರತೀ ತೀರ್ಥ ಸ್ವಾಮೀಜಿಗಳು ಪೀಠಾರೋಹಣ ಮಾಡಿ 50 ವರ್ಷ ತುಂಬಿದ ನೆನಪಿನಲ್ಲಿ ಸುವರ್ಣ ಭಾರತಿ ಕಾರ್ಯಕ್ರಮದ ಯೋಜನೆಯಡಿ ಶೃಂಗೇರಿ ಮಠದಿಂದ ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಇಲ್ಲಿನ ಬ್ರಾಹ್ಮಣ ಮಹಾ ಸಭಾದವರಿಗೆ ಶ್ರೀಮಠದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಒಂದು ಲಕ್ಷ ರೂಪಾಯಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಡಾ.ಎ.ಜಿ.ರಮೇಶ್ ಮಾತನಾಡಿ, ಕಳೆದ ತಿಂಗಳು ವೈದ್ಯರ ತಂಡ ಆಗಮಿಸಿ ಪೂರ್ವಭಾವಿಯಾಗಿ ಪ್ರಾಥಮಿಕ ಶಿಬಿರ ನಡೆಸಿ 450 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಆ ರೋಗಿಗಳಿಗೆ ಸಂಬಂಧಪಟ್ಟಂತೆ ಚೆನೈನಿಂದ 14 ತಜ್ಞ ವೈದ್ಯರು, ಅಮೆರಿಕಾದ ತಜ್ಞ ವೈದ್ಯರು ಹಾಗೂ 6 ತಾಂತ್ರಿಕ ಸಿಬ್ಬಂದಿಗಳು ಆಗಮಿಸಿದ್ದಾರೆ. ಕಾಯಿಲೆ ಪರೀಕ್ಷಿಸಲು ಎಲ್ಲ ಪರಿಕರಗಳನ್ನು ತರಲಾಗಿದೆ ಎಂದು ತಿಳಿಸಿದರು.
ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ಆರೋಗ್ಯವೇ ಭಾಗ. ಜನರಿಗೆ ಅನುಕೂಲವಾಗಲಿ ಎಂದು ಶೃಂಗೇರಿ ಮಠದ ಸಹಕಾರದೊಂದಿಗೆ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದರು. ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಕೃಷ್ಣಮೂರ್ತಿಗಳನ್ನು ಸನ್ಮಾನಿಸಲಾಯಿತು. ಎಂ.ವಿ.ರಾಜೇಂದ್ರ ಕುಮಾರ್, ಎಂ.ಆರ್.ರವಿಶಂಕರ್ ಉಪಸ್ಥಿತರಿದ್ದರು.