

ಮಂಡ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ಹನುಮಾನ್ ಚಾಲೀಸ ಪ್ರತಿ ವಿತರಣೆ ಮಾಡಲಾಗುವುದು ಎಂದು ಮೂಡಲ ಬಾಗಿಲು ಹನುಮ ಮಾಲ ಸಮಿತಿ ಜಿಲ್ಲಾ ಖಜಾಂಚಿ ಬಿ.ಹರ್ಷ ಹೇಳಿದರು.
ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹನುಮಾನ್ ಚಾಲೀಸ ಪ್ರತಿ ವಿತರಣೆಗೆ ಚಾಲನೆ ನೀಡಿದರು. ಅದರಂತೆ ಮುಂದಿನ ದಿನದಲ್ಲಿ ಜಿಲ್ಲಾದ್ಯಂತ ಮನೆಗಳಿಗೆ ವಿತರಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಸಂಚಾಲಕ ಸುಜನ್‌ಗೌಡ ಮಾತನಾಡಿ, ಸಮಿತಿಯಿಂದ ನ.23ರಂದು ಜಿಲ್ಲಾ, ತಾಲೂಕು ಮತ್ತು ಹೋಬಳಿ ಕೇಂದ್ರದ ಆಂಜನೇಯಸ್ವಾಮಿ ದೇವಾಲಯಯಲ್ಲಿ ಶ್ರೀರಾಮತಾರಕ ಹೋಮದ ಜತೆಗೆ ಹನುಮ ಮಾಲಾಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದ ಆವರಣದಲ್ಲಿ ಡಿ.2ರಂದು ಸಭಾ ಕಾರ್ಯಕ್ರಮ ನಡೆಯಲಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭಾಗವಹಿಸುವರು. ಅಂದು ನಿಮಿಷಾಂಬ ದೇವಾಲಯದಿಂದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಶೋಭಯಾತ್ರೆ ನಡೆಯಲಿದೆ ಎಂದು ವಿವರಿಸಿದರು.
ಸಮಿತಿಯ ಸಿದ್ದರಾಜು, ದಿವಾಕರ್ ಇದ್ದರು.